ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ನೂತನ ತಾಲೂಕು ಕಡಬ, ಅಭಿವೃದ್ಧಿಯ ಪಥದಲ್ಲಿ ಮೈಲಿಗಲ್ಲು ಸ್ಥಾಪಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ತೆರಿಗೆ ಸಂಗ್ರಹಣೆಯಲ್ಲಿ ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚು ಸಾಧನೆ ಮಾಡುವ ಮೂಲಕ ಕಡಬ ತಾಲೂಕು ಕರ್ನಾಟಕ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಅಲಂಕರಿಸಿದೆ. ತಾಲೂಕಿನ 21 ಗ್ರಾಮ ಪಂಚಾಯತ್‌ಗಳು ಪ್ರಸಕ್ತ ಸಾಲಿನ ಬೇಡಿಕೆಯಲ್ಲಿ (Current Demand) ಶೇ. 100 ಕ್ಕಿಂತ ಹೆಚ್ಚು ಸಾಧನೆ ಮಾಡಿವೆ. ತಾಲೂಕಿನ ಒಟ್ಟು ಸಾಧನೆ ಶೇ. 103 ರಷ್ಟಿದೆ.
ವಾರ್ಷಿಕವಾಗಿ 3.34 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ನೀಡಲಾಗಿತ್ತು. ಆದರೆ, ಮಾರ್ಚ್ ತಿಂಗಳು ಮುಗಿಯುವ ಮುನ್ನವೇ 3.41 ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಒಂದರಿಂದಲೇ ದಾಖಲೆಯ 1 ಕೋಟಿ ರೂ.ಗೂ ಅಧಿಕ ತೆರಿಗೆ ಸಂಗ್ರಹವಾಗಿದೆ. ನೆಲ್ಯಾಡಿ (33 ಲಕ್ಷ), ಕೌಕ್ರಾಡಿ (29 ಲಕ್ಷ) ಮತ್ತು ರಾಮಕುಂಜ (20 ಲಕ್ಷ) ಪಂಚಾಯತ್‌ಗಳು ನಂತರದ ಸ್ಥಾನದಲ್ಲಿವೆ.

ಜಿಲ್ಲೆಯ ಇತರ ತಾಲೂಕುಗಳ ಪ್ರಗತಿ
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ತೆರಿಗೆ ಸಂಗ್ರಹಣೆ ಶೇ. 92 ರಷ್ಟಿದ್ದು, ತಾಲೂಕುವಾರು ಪಟ್ಟಿ ಇಲ್ಲಿದೆ:
ಕಡಬ: ಶೇ. 103
ಮೂಡುಬಿದ್ರೆ: ಶೇ. 99
ಉಳ್ಳಾಲ: ಶೇ. 96
ಸುಳ್ಯ: ಶೇ. 95
ಬೆಳ್ತಂಗಡಿ: ಶೇ. 94
ಇದನ್ನೂ ಓದಿ:ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ: ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಭಟ್ಕಳದ ವ್ಯಕ್ತಿ ಅರೆಸ್ಟ್!
ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್. ಅವರ ನೇತೃತ್ವದಲ್ಲಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಬಿಲ್ ಕಲೆಕ್ಟರ್‌ಗಳು ಮತ್ತು ಸಿಬ್ಬಂದಿ ವರ್ಗದ ಶ್ರಮ ಈ ಸಾಧನೆಗೆ ಕಾರಣವಾಗಿದೆ. ಅಲ್ಲದೆ, ಸರ್ಕಾರದ ಶೇ. 5 ವಿನಾಯಿತಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡ ಜಾಗೃತ ನಾಗರಿಕರ ಸಹಕಾರ ಈ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

