ಟೊರೊಂಟೊ : ಕೆನಡಾದಲ್ಲಿ ನೆಲೆಸಿದ್ದ ಪಂಜಾಬಿ ಮೂಲದ ಖ್ಯಾತ ಗಾಯಕಿ, ಯೂಟ್ಯೂಬರ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನ್ಯಾನ್ಸಿ ಗ್ರೇವಾಲ್ ಅವರನ್ನು ಕಿಡಿಗೇಡಿಗಳು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಟಾಡ್ ಲೇನ್ ವಲಯದಲ್ಲಿ ನಡೆದ ಈ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ನ್ಯಾನ್ಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ನ್ಯಾನ್ಸಿ ಗ್ರೇವಾಲ್ ಅವರು ಕೆನಡಾದಲ್ಲಿ ಸಕ್ರಿಯವಾಗಿರುವ ಖಲಿಸ್ತಾನಿ ಉಗ್ರ ಸಂಘಟನೆಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದರು. ಖಲಿಸ್ತಾನಿ ಚಟುವಟಿಕೆಗಳು ಭಾರತ ಮತ್ತು ಕೆನಡಾ ನಡುವಿನ ಸಂಬಂಧವನ್ನು ಹಾಳುಮಾಡುತ್ತಿವೆ ಎಂದು ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಭಾರತ ವಿರೋಧಿ ನಡೆಗಳನ್ನು ವಿರೋಧಿಸುತ್ತಿದ್ದ ಕಾರಣಕ್ಕಾಗಿ ಅವರು ಖಲಿಸ್ತಾನಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದರು ಎನ್ನಲಾಗಿದೆ. ಅವರ ಹತ್ಯೆಯ ಹಿಂದೆ ಈ ಸಂಘಟನೆಗಳ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ನ್ಯಾನ್ಸಿ ಅವರ ನಿಧನದ ಸುದ್ದಿಯನ್ನು ಅವರ ಸಹೋದರಿ ಅಲೀಶಾ ಗ್ರೇವಾಲ್ ಖಚಿತಪಡಿಸಿದ್ದು, “ನನ್ನ ಶಕ್ತಿ ಮತ್ತು ಸ್ಪೂರ್ತಿಯಾಗಿದ್ದ ಸಹೋದರಿಯನ್ನು ಕಳೆದುಕೊಂಡಿದ್ದೇನೆ” ಎಂದು ಇನ್ಸ್ಟಾಗ್ರಾಮ್ನಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ.
ಕೆನಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೆನಡಾದಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಮತ್ತು ಭಾರತ ಪರ ಧ್ವನಿ ಎತ್ತುವವರ ಮೇಲೆ ನಡೆಯುತ್ತಿರುವ ದಾಳಿಗಳು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿವೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

