ದೆಹಲಿ : ಡೆಲ್ಲಿ ಪೊಲೀಸರು ದಾಖಲಿಸಿದ ಎಫ್ಐಆರ್ಗೆ ಸಂಬಂಧಿಸಿದಂತೆ, ಬುಧವಾರ ಬೆಳಗಿನ ಜಾವ ಟರ್ಕ್ಮನ್ ಗೇಟ್ನಲ್ಲಿರುವ ಶತಮಾನ ಹಳೆಯ ಮಸೀದಿಯ ಸಮೀಪ ಮಹಾನಗರ ಪಾಲಿಕೆ ನಡೆಸಿದ ಧ್ವಂಸ ಕಾರ್ಯಾಚರಣೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಯಲ್ಲಿ ಕನಿಷ್ಠ ಐದು ಪೊಲೀಸ್ ಸಿಬ್ಬಂದಿಗೆ ಗಾಯ ;

ಈ ಬಗ್ಗೆ ದೃಢಪಡಿಸಿದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ನಿಧಿನ್ ವಲ್ಸನ್, ಭಾರತೀಯ ನ್ಯಾಯ ಸಂಹಿತೆ–2023ರ ಸಂಬಂಧಿತ ಕಲಂಗಳು 221, 132, 121, 191(2), 191(3), 223(A), 3(5) ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ–1984 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಗಲಭೆ, ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಸರ್ಕಾರಿ ಆಸ್ತಿಗೆ ಹಾನಿ ಉಂಟುಮಾಡುವುದು ಮತ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಗಾಯಗೊಳಿಸುವುದು ಸೇರಿದಂತೆ ಆರೋಪಗಳು ಸೇರಿವೆ. ಘಟನೆಯಲ್ಲಿ ಕನಿಷ್ಠ ಐದು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಅಧ್ಯಕ್ಷರನ್ನು ವಶದಲ್ಲಿರಿಸಿ ʼವೆನೆಜುವೆಲಾ 50 ಮಿಲಿಯನ್ ಬ್ಯಾರಲ್ ತೈಲ ಅಮೆರಿಕಕ್ಕೆ ಹಸ್ತಾಂತರಿಸಲಿದೆʼ ಎಂದ ಟ್ರಂಪ್
ದೆಹಲಿಯ ಕೆಲವು ಭಾಗಗಳಲ್ಲಿ ಉದ್ವಿಗ್ನತೆ ;
ಘಟನೆಯ ಸಂಬಂಧ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ಧರಿಸಿದ್ದ ಬಾಡಿಕ್ಯಾಮ್ಗಳಲ್ಲಿ ದಾಖಲಾಗಿರುವ ವೀಡಿಯೊಗಳು ಹಾಗೂ ಇತರ ಲಭ್ಯ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಬೆಳವಣಿಗೆಗಳ ಬಗ್ಗೆ ತಿಳಿದ ಅಧಿಕಾರಿಯೊಬ್ಬರು ಹೇಳಿದರು. ಬುಧವಾರ ಬೆಳಿಗ್ಗೆ ಪರಿಸ್ಥಿತಿ ಸಾಮಾನ್ಯವಾಗಿದ್ದರೂ, ರಾಂಲೀಲಾ ಮೈದಾನದ ಸಮೀಪ ಇರುವ ಮಸ್ಜಿದ್ ಸಯ್ಯದ್ ಎಲಾಹಿ (ಫೈಝ್-ಎ-ಎಲಾಹಿ ಮಸೀದಿ)ಗೆ ಸೇರಿಕೊಂಡಿರುವುದಾಗಿ ಆರೋಪಿಸಲಾದ ಅಕ್ರಮ ಅತಿಕ್ರಮಣಗಳನ್ನು ತೆರವುಗೊಳಿಸಲು ಭಾರೀ ಪೊಲೀಸ್ ಬಂದೋಬಸ್ತಿನೊಂದಿಗೆ ನಾಗರಿಕ ಸಂಸ್ಥೆಗಳು ಮುಂದಾದ ಬಳಿಕ ಹಳೆಯ ದೆಹಲಿಯ ಕೆಲವು ಭಾಗಗಳಲ್ಲಿ ಉದ್ವಿಗ್ನತೆ ಉಂಟಾಯಿತು. ಬೆಳಿಗ್ಗೆ 8 ಗಂಟೆಗೆ ಧ್ವಂಸ ಕಾರ್ಯಾಚರಣೆ ಆರಂಭವಾಗಬೇಕಿದ್ದರೂ, ಅದು ಸುಮಾರು ಬೆಳಗಿನ 1:30ಕ್ಕೆ ಪ್ರಾರಂಭಗೊಂಡಿದ್ದು, ಸ್ಥಳೀಯ ನಿವಾಸಿಗಳ ಪ್ರತಿಭಟನೆಗೆ ಕಾರಣವಾಯಿತು. ಪಕ್ಕದ ಪ್ರದೇಶಗಳಲ್ಲಿ ಹರಿದಾಡಿದ ವೀಡಿಯೊಗಳಲ್ಲಿ, ಮಸೀದಿಯ ಸಮೀಪದ ಕಟ್ಟಡಗಳನ್ನು ಬುಲ್ಡೋಜರ್ಗಳು ಮತ್ತು ಭೂಮಿ ತೋಡುವ ಯಂತ್ರಗಳು ಕೆಡವುತ್ತಿರುವುದು ಹಾಗೂ ಪೊಲೀಸ್ ಸಿಬ್ಬಂದಿ ಕಾವಲು ನಿಂತಿರುವುದು ಕಂಡುಬಂದಿದೆ.
ಮಧ್ಯ ವಲಯದ ಸಂಯುಕ್ತ ಪೊಲೀಸ್ ಆಯುಕ್ತ ಮಧುರ್ ವರ್ಮಾ, “ದೆಹಲಿ ಹೈಕೋರ್ಟ್ ನೀಡಿದ ನಿರ್ದೇಶನಗಳ ಅನುಸಾರ ಈ ಧ್ವಂಸ ಕಾರ್ಯಾಚರಣೆ ನಡೆಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವ್ಯಾಪಕ ವ್ಯವಸ್ಥೆ ಮಾಡಲಾಗಿತ್ತು,” ಎಂದು ಹೇಳಿದರು. ಸಂಪೂರ್ಣ ಪ್ರದೇಶವನ್ನು ಒಂಬತ್ತು ವಲಯಗಳಾಗಿ ವಿಭಜಿಸಿ, ಪ್ರತಿಯೊಂದು ವಲಯಕ್ಕೂ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ದೆಹಲಿ ಪೊಲೀಸ್ ಮತ್ತು ರ್ಯಾಪಿಡ್ ಆಕ್ಷನ್ ಫೋರ್ಸ್ (RAF)ನ ಹತ್ತುಕ್ಕೂ ಹೆಚ್ಚು ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದರು. ಶಾಂತಿ ಕಾಪಾಡುವ ಉದ್ದೇಶದಿಂದ ಅಮನ್ ಕಮಿಟಿ ಸದಸ್ಯರು ಮತ್ತು ಸ್ಥಳೀಯ ಹಿತಾಸಕ್ತಿಗಳೊಂದಿಗೆ ಮುಂಚಿತವಾಗಿ ಸಂಯೋಜನಾ ಸಭೆಗಳು ನಡೆಸಲಾಗಿತ್ತು ಎಂದು ವರ್ಮಾ ಹೇಳಿದರು.
ಈ ನಡುವೆ, ಮಸ್ಜಿದ್ ಸಯ್ಯದ್ ಎಲಾಹಿಯ ನಿರ್ವಹಣಾ ಸಮಿತಿ ಮಸೀದಿ ಮತ್ತು ಕಬ್ರಿಸ್ತಾನಕ್ಕೆ ಹೊಂದಿಕೊಂಡಿರುವ ಭೂಮಿಯಿಂದ ಅಕ್ರಮ ಅತಿಕ್ರಮಣ ತೆರವುಗೊಳಿಸುವ ಎಂಸಿಡಿ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಮಂಗಳವಾರ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿರುವ ಸಂದರ್ಭದಲ್ಲೇ ಈ ಧ್ವಂಸ ಕಾರ್ಯಾಚರಣೆ ನಡೆದಿದೆ ಎಂಬುವುದು ವರದಿಯಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

