ಮಂಗಳೂರು: ಯುಗಾದಿ ಮತ್ತು ರಮ್ಜಾನ್ ಹಬ್ಬದ ಹಿನ್ನೆಲೆ ಊರಿಗೆ ತೆರಳಿದ್ದ ಪ್ರಯಾಣಿಕರ ಸುಗಮ ವಾಪಸಿಗಾಗಿ ದಕ್ಷಿಣ ಪಶ್ಚಿಮ ರೈಲ್ವೆ (SWR) ವಿಶೇಷ ರೈಲು ಸೇವೆಯನ್ನು ಘೋಷಿಸಿದೆ.
ಮಡಗಾಂವ್‌ನಿಂದ ಬೆಂಗಳೂರಿಗೆ ಸಂಚರಿಸುವ ಈ ವಿಶೇಷ ರೈಲು ಕಾರವಾರ, ಉಡುಪಿ ಮತ್ತು ಮಂಗಳೂರು ಮಾರ್ಗವಾಗಿ ಪ್ರಯಾಣಿಸಲಿದೆ. ಈ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಾರ್ಚ್ 22ರಂದು ಈ ವಿಶೇಷ ರೈಲು ಮಡಗಾಂವ್‌ನಿಂದ ಬೆಳಗ್ಗೆ 11:00ಕ್ಕೆ ಹೊರಡಲಿದೆ. ಬಳಿಕ ಕಾರವಾರ (11:28), ಗೋಕರ್ಣ (12:30), ಮುರುಡೇಶ್ವರ (1:40), ಬೈಂದೂರು (2:12), ಕುಂದಾಪುರ (2:40), ಬಾರ್ಕೂರು (2:55), ಉಡುಪಿ (3:30), ಮುಲ್ಕಿ (3:58), ಸುರತ್ಕಲ್ (4:14), ಬಂಟ್ವಾಳ (6:00), ಕಬಕ ಪುತ್ತೂರು (6:28) ಹಾಗೂ ಸುಬ್ರಹ್ಮಣ್ಯ ರಸ್ತೆಯ ಮೂಲಕ (7:50) ಸಂಚರಿಸಿ ಮುಂದಿನ ದಿನ ಬೆಳಗ್ಗೆ 5:00ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣ ತಲುಪಲಿದೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ.. ಕರ್ನಾಟಕದಲ್ಲಿ 4 ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಬದಲಾವಣೆ
ಹಬ್ಬದ ಬಳಿಕ ಕೆಲಸಕ್ಕೆ ಹಿಂತಿರುಗುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿರುವ ಹಿನ್ನೆಲೆ ಈ ಸೇವೆಯನ್ನು ಆರಂಭಿಸಲಾಗಿದೆ. ಹಿಂದಿನ ವಿಶೇಷ ರೈಲು ಸೇವೆಗೆ ಭಾರೀ ಸ್ಪಂದನೆ ದೊರೆತಿದ್ದು, ಈ ಬಾರಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
ಇದೇ ವೇಳೆ ಸ್ಥಳೀಯ ಪ್ರಯಾಣಿಕರಿಗಾಗಿ ತುಮಕೂರು–ಬಾಣಸವಾಡಿ ಮಾರ್ಗದಲ್ಲಿ ಯಶವಂತಪುರ ಮೂಲಕ ವಿಶೇಷ MEMU ರೈಲು ಸೇವೆಯನ್ನೂ ಮಾರ್ಚ್ 22ರಂದು ಒದಗಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

