ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿ, ಹೆಂಡತಿ ತನ್ನ ಪತಿಯ ಮರ್ಮಾಂಗಕ್ಕೆ ಬಲವಾಗಿ ಒದ್ದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಮಹಿಳೆ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆಗೊಳಗಾದ ಪತಿ ಮತ್ತು ಆರೋಪಿ ಮಹಿಳೆ ಕಳೆದ ಒಂದು ವರ್ಷದ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ ಮಹಿಳೆ ವಿಚಿತ್ರವಾಗಿ ವರ್ತಿಸುತ್ತಾ ಪತಿಯೊಂದಿಗೆ ಸಣ್ಣಪುಟ್ಟ ವಿಷಯಕ್ಕೂ ಜಗಳ ತೆಗೆಯುತ್ತಿದ್ದಳು ಎನ್ನಲಾಗಿದೆ.

ಘಟನೆಯ ದಿನ ಬೆಳಿಗ್ಗೆ ಪತಿಯ ಬಟ್ಟೆ ಹರಿದು ಹಾಕಿ ಗಲಾಟೆ ಮಾಡಿದ್ದ ಮಹಿಳೆ, ನಂತರ ಮಧ್ಯರಾತ್ರಿ ಪತಿ ಗಾಢ ನಿದ್ರೆಯಲ್ಲಿದ್ದಾಗ ಆತನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ. ತೀವ್ರ ನೋವಿನಿಂದ ಕಿರುಚಾಡಿದ ಪತಿ, ಸ್ವತಃ ತಾನೇ ಅಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇದನ್ನೂ ಓದಿ: ರಂಜಾನ್ ನಮಾಜ್ ವೇಳೆ ಹೆಜ್ಜೇನು ದಾಳಿ: 25 ಮಂದಿ ಆಸ್ಪತ್ರೆಗೆ ದಾಖಲು; ಐವರ ಸ್ಥಿತಿ ಗಂಭೀರ
ಗಂಡನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ಮಹಿಳೆ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪ್ರಸ್ತುತ ಆಕೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಪತಿಯನ್ನು ನೋಡಲು ಬಂದ ಮಹಿಳೆಯನ್ನು ಕುಟುಂಬಸ್ಥರು ತಡೆದಿದ್ದು, ಈ ಸಂಘರ್ಷದ ನಂತರವೇ ಆಕೆ ವಿಷ ಸೇವಿಸಿದ್ದಾಳೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

