ಬೆಂಗಳೂರು: ನಗರವನ್ನು ಬೆಚ್ಚಿಬೀಳಿಸಿದ ಘಟನೆಯಲ್ಲಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ನಾಲ್ಕೂವರೆ ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.
ಗುರುವಾರ ಸಂಜೆ ಮನೆ ಸಮೀಪ ಆಟವಾಡುತ್ತಿದ್ದ ಬಾಲಕಿ ಕಾಣೆಯಾಗಿದ್ದು, ಪೋಷಕರು ನಡೆಸಿದ ಹುಡುಕಾಟ ಫಲಕಾರಿಯಾಗದೇ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಿದರು.

ರಾತ್ರಿ ವೇಳೆಗೆ ಬೋಳುಗುಟ್ಟ ಪ್ರದೇಶದ ನಿರ್ಜನ ನೀಲಗಿರಿ ತೋಪಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅಪರಿಚಿತರು ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗುರುತು ಮರೆಮಾಚಲು ಮುಖವನ್ನು ಕಲ್ಲಿನಿಂದ ಜಜ್ಜಲಾಗಿರುವುದು ಕಂಡುಬಂದಿದೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯ ತಪ್ಪೊಪ್ಪಿಗೆ ಅಂಗೀಕರಿಸಿದ ಕೋರ್ಟ್

ದೇಹದ ಸ್ಥಿತಿ ಪರಿಶೀಲಿಸಿದಾಗ ಲೈಂಗಿಕ ದೌರ್ಜನ್ಯ ಎಸಗಿರುವ ಸಾಧ್ಯತೆಯೂ ಪೊಲೀಸರು ನಿರಾಕರಿಸಿಲ್ಲ. ಈ ಕುರಿತು ಸ್ಪಷ್ಟ ಮಾಹಿತಿ ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಲಭ್ಯವಾಗಲಿದೆ. ಬಾಲಕಿಯ ಕುಟುಂಬ ಮೂಲತಃ ಅಸ್ಸಾಂ ಮೂಲದವರಾಗಿದ್ದು, ತಂದೆ ನಗರದಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕುಟುಂಬ ತಾತ್ಕಾಲಿಕ ವಾಸದಲ್ಲಿ ಇದ್ದುದಾಗಿ ತಿಳಿದುಬಂದಿದೆ.
ಆಮಿಷವೊಡ್ಡಿ ಬಾಲಕಿಯನ್ನು ಪರಿಚಿತರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣ, ಕೊಲೆ ಹಾಗೂ POCSO ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

