ಪುತ್ತೂರು: ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಭಿವಂದನಾ ಸಮಿತಿ ಪುತ್ತೂರು ಮತ್ತು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು ಜಂಟಿ ಆಶ್ರಯದಲ್ಲಿ ಜಗದ್ಗುರು ವಿಧುಶೇಖರ ಭಾರತೀ ಸನ್ನಿಧಾನಂಗಳವರಿಗೆ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಏ.7 ರಂದು ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಬಳಿಕ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರು, ಗುರುವಂದನಾ ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರ ಜನ ಸೇರಬಹುದು ಎಂದು ಅಂದಾಜಿಸಲಾಗಿದೆ. ಇಷ್ಟು ಮಂದಿ ಸೇರುವ ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯವಶ್ಯಕವಾಗಿದೆ. ಶೃಂಗೇರಿ ಶ್ರೀಗಳಪಾದಪೂಜೆಗೆ ಅವಕಾಶವಿದೆ ಎಂದರು.

ಗುರು ಪರಂಪರೆ ಕಳೆದುಕೊಡಿರುವುದೇ ಹಿಂದೂ ಧರ್ಮಕ್ಕೆ ದೊಡ್ಡ ಆಘಾತ. ಮಕ್ಕಳಿಗೆ ಧರ್ಮದ ಮಾರ್ಗದರ್ಶನ ನೀಡುವಲ್ಲಿ ಮನೆಮಂದಿ ಎಡವಿದ್ದಾರೆ. ಮಕ್ಕಳಿಗೆ ಆಯಾಯ ವಯಸ್ಸಿನಲ್ಲಿ ನೀಡಬೇಕಾದ ಧರ್ಮ, ಸಂಸ್ಕೃತಿಯ ಶಿಕ್ಷಣ ನೀಡಲಾಗುತ್ತಿಲ್ಲ. ಈ ನೆಲೆಯಲ್ಲಿ ಪುತ್ತೂರಿನಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವ ಕಾರ್ಯವನ್ನು ಪ್ರಾರಂಭಿಸಿದೆವು ಎಂದರು.
ನಾವೆಲ್ಲರೂ ಒಗ್ಗೂಡಿಕೊಂಡು ಗುರುಪೀಠದ ಪರಂಪರೆ, ಪರಿಕಲ್ಪನೆಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಈ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದೇವೆ. ವಿಧುಶೇಖರ ಶ್ರೀಗಳು ಧರ್ಮ, ದೇಶದ ಬಗ್ಗೆ ಅಪಾರ ಕಾಳಜಿ ವಹಿಸಿದ್ದಾರೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಎಲ್ಲಾ ಸಮುದಾಯದ ಮನೆಮನೆಗಳಿಗೆ ತಲುಪಿಸಲಾಗುವುದು ಎಂದರು.

ಜಾತಿವಾರು ಅಥವಾ ಸಾರ್ವಜನಿಕ ಕೆಸರುಗದ್ದೆ, ಕ್ರಿಕೆಟ್ ಇತ್ಯಾದಿ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಆದರೆ, ಧರ್ಮ ಸಂಘಟನೆಗೆ ಹೆಚ್ಚಿನ ಒತ್ತನ್ನು ನೀಡಬೇಕಾಗಿದ್ದು, ಈ ನಿಟ್ಟುನಲ್ಲಿ ಪ್ರತಿ ಸಮಾಜದ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕು. ಒಂದು ಕಣ್ಣಲ್ಲಿ ಭಾರತ, ಇನ್ನೊಂದು ಕಣ್ಣಲ್ಲಿ ಧರ್ಮವನ್ನು ಕಾಣಬೇಕು. ಈ ನಿಟ್ಟಿನಲ್ಲಿ ಸದಾ ದೇಶ, ಧರ್ಮದ ಬಗ್ಗೆ ಚಿಂತನೆ ಮಾಡುವ ಶೃಂಗೇರಿ ಶ್ರೀಗಳ ಗುರುವಂದನಾ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸಬೇಕು. ಈ ಕಾರ್ಯಕ್ರಮದ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ನಮ್ಮ ಮನೆಯ ಕಾರ್ಯಕ್ರಮ ಎಂದು ಭಾವಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಅಭಿವಂದನಾ ಸಮಿತಿಯ ಗೌರವಾಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ, ಕಾರ್ಯಾಧ್ಯಕ್ಷ ಶಿವರಾಮ ಆಳ್ವ, ಪ್ರಧಾನ ಕಾರ್ಯದರ್ಶಿ ಆರ್ಸಿ ನಾರಾಯಣ ರೆಂಜ, ಖಜಾಂಜಿ ಕಾವು ಹೇಮನಾಥ ಶೆಟ್ಟಿ, ಧರ್ಮಾಭ್ಯುದಯ ತಾಲೂಕು ಸಮಿತಿ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಸೇರಿದಂತೆ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ಕೋರಿದರು. ಅಭಿವಂದನಾ ಸಮಿತಿಯ ಸಂಚಾಲಕ ಡಾ.ಸುರೇಶ್ ಪುತ್ತೂರಾಯ ಉಪಸ್ಥಿತರಿದ್ದರು.

ಕಾರ್ಯಕ್ರಮಗಳ ವಿವರ
ಮೇ 6 ಮತ್ತು 7 ರಂದು ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲ ದಿನದಂದು ಸಂಜೆ 6 ಗಂಟೆಗೆ ಶ್ರೀಗಳು ಪುತ್ತೂರಿಗೆ ಆಮಿಸಲಿದ್ದು, ಪೋಳ್ಯ ವೆಂಕಟ್ರಮಣ ಮಠದಿಂದ ವಾಹನ ಜಾಥಾ, ಪೂರ್ಣಕುಂಭ ಸ್ವಾಗತ, ಧೂಳೀ ಪಾದಪೂಜೆ ನಡೆಯಲಿದೆ. ಶ್ರೀಗಳು ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಆಗಮಿಸಿ ರಾತ್ರಿ 8 ರಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಿಸಲಿದ್ದಾರೆ.
ಮೇ 7 ರಂದು ಧರ್ಮಾಭ್ಯುದಯ- ಧರ್ಮ ಶಿಕ್ಷಣ ತರಗತಿಗಳ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಶಿಷ್ಯರಿಂದ ಸಮರ್ಪಣಮ್ ಕಾರ್ಯಕ್ರಮ ನಡೆಯಲಿದೆ. 9.30 ರಿಂದ ಶ್ರೀಗಳ ಅಭಿವಂದನಾ ಕಾರ್ಯಕ್ರಮ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಸಮಾರೋಪ ಸಮಾರಂಭ, ಶ್ರೀಗಳ ಆಶೀರ್ವಚನ ಹಾಗೂ ಫಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ.
ಬಳಿಕ ಶ್ರೀಮದ್ಜಗದ್ಗುರುಗಳಿಗೆ ಧರ್ಮಾಭ್ಯುದಯ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಅವರು ಗೌರವಾರ್ಪಣೆ ಮಾಡಲಿದ್ದಾರೆ. ಬಳಿಕ ವಿದ್ವಾಂಸ ವಿದ್ಯಾ ವಾಚಸ್ಪತಿ ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟ ಅವರಿಂದ ಅಭಿವಂದನಾ ನುಡಿ ನಡೆಯಲಿದೆ.
ಇದನ್ನೂ ಓದಿ: ತಂತ್ರಜ್ಞಾನ ಬಳಕೆಯ ನಡುವೆ ಚಿಂತನಾ ಶಕ್ತಿ ಕಾಪಾಡಿಕೊಳ್ಳಿ: ಅತುಲ್ ಭಟ್
ಶೃಂಗೇರಿ ಶ್ರೀಗಳಿಗೆ ವಿಶೇಷ ಗುರುಕಾಣಿಕೆ
ಶೃಂಗೇರಿ ಶ್ರೀಗಳಿಗೆ ಭಾರತ ಮಾತೆಯ ಪುತ್ಥಳಿಯನ್ನು ಗುರುಗಳಿಗೆ ಗುರುಕಾಣಿಕೆಯಾಗಿ ನೀಡುವ ಬಗ್ಗೆ ಸಭೆಯಲ್ಲಿ ಅನುಮೋದಿಸಲಾಯಿತು. ಅಲ್ಲದೆ, ಏ.21 ರಂದು ನಡೆಯುವ ಮತ್ತೊಂದು ಸಭೆಯಲ್ಲಿ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ವಿವಿಧ ಸಮಿತಿಗಳನ್ನು ರಚನೆ ಮಾಡಲು ನಿರ್ಣಯಿಸಲಾಯಿತು.
ಇನ್ನಷ್ಟೂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

