ಮಂಗಳೂರು: ಖಾಸಗಿ ವಾಹನಗಳಲ್ಲಿ (ವೈಟ್ ಬೋರ್ಡ್) ನಿಯಮಬಾಹಿರವಾಗಿ ಶಾಲಾ ಮಕ್ಕಳನ್ನು ಕರೆದೊಯ್ಯುವ ದಂಧೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಸಾರಿಗೆ ಇಲಾಖೆ ಮತ್ತು ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಮಕ್ಕಳ ವಾಹನ ಚಾಲಕರ ಸಂಘ ಗಂಭೀರ ಆರೋಪ ಮಾಡಿದೆ. ಅಕ್ರಮ ಸಾರಿಗೆಯ ಬಗ್ಗೆ ಈಗಾಗಲೇ ಸುಮಾರು 17 ದೂರುಗಳನ್ನು ನೀಡಲಾಗಿದೆ. ಆದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಕಿಡಿಕಾರಿದ್ದಾರೆ.
ಈ ಹಿಂದೆ ತೊಕ್ಕೊಟ್ಟುವಿನಲ್ಲಿ ಖಾಸಗಿ ವಾಹನವೊಂದು ಅಪಘಾತಕ್ಕೀಡಾದಾಗ ಮಕ್ಕಳಿಗೆ ಸರಿಯಾದ ಪರಿಹಾರ ಸಿಕ್ಕಿರಲಿಲ್ಲ. ಇಂತಹ ವಾಹನಗಳು ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿವೆ.

ಪರವಾನಗಿ ಹೊಂದಿರುವ ಪ್ರವಾಸಿ ವಾಹನಗಳು (Tourist Vehicles) ವರ್ಷಕ್ಕೆ ಅಂದಾಜು 23,000 ರೂ. ತೆರಿಗೆ ಮತ್ತು ವಿಮೆಯನ್ನು ಪಾವತಿಸುತ್ತವೆ. ಅಲ್ಲದೆ ಸರ್ಕಾರದ ಆದೇಶದಂತೆ 14,000 ರೂ. ವೆಚ್ಚದ ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಿಕೊಂಡಿವೆ. ಆದರೆ, ಅಕ್ರಮವಾಗಿ ಮಕ್ಕಳನ್ನು ಸಾಗಿಸುವ ಖಾಸಗಿ ವಾಹನಗಳು ಯಾವುದೇ ತೆರಿಗೆ ಪಾವತಿಸುತ್ತಿಲ್ಲ ಹಾಗೂ ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಿಲ್ಲ.
ಇದನ್ನೂ ಓದಿ: ಯಾದಗಿರಿಯಲ್ಲಿ ಭೀಕರ ಅಪಘಾತ: ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ, ಬೆಂಕಿಗಾಹುತಿಯಾದ 6 ಮಂದಿ!

ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗುವ ಮೊದಲೇ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ, ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಸಂಘ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಸಂಸ್ಥಾಪಕ ಅಧ್ಯಕ್ಷ ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

