ಪುತ್ತೂರು: ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರ ಜಾತ್ರಾ ಗದ್ದೆಯಲ್ಲಿ ಇಂದಿನಿಂದ (ಜ.10) ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ ಹಾಗೂ ಸಸ್ಯ ಜಾತ್ರೆ ಉದ್ಘಾಟನೆಗೊಂಡಿತು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಇದರ ವತಿಯಿಂದ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಕೇಂದ್ರ ಹಾಗೂ ರೈತ ಕುಡ್ಲ ಪ್ರತಿಷ್ಠಾನದ ಸಹಯೋಗದೊಂದಿಗೆ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳನ್ನು ಒಳಗೊಂಡು ಜ.10 ರಿಂದ ಜ.12ರ ವರೆಗೆ ಈ ಮೇಳವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಚೆಲುವರಾಯಸದವಾಮಿ, ಕೃಷಿ ಮೇಳವು ರೈತರಿಗೆ ಅನೇಕ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಸಹಕಾರಿಯಾಗಲಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಮಾಡಿದರೆ ಹೆಚ್ಚಿನ ಆದಾಯ ಗಳಿಸಲು ಅನುಕೂಲವಾಗಲಿದೆ ಎಂದರು.
ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಿಗೆ ಸೀಮಿತವಾಗಿಲ್ಲ. ಕೃಷಿ ಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ ಎಂದರು.

ಭತ್ತಕ್ಕೆ ಪ್ರೋತ್ಸಾಹ ಧನ ನೀಡುವ ಬಗ್ಗೆ ಬೇಡಿಕೆ ಇದೆ. ಪ್ರಸಕ್ತ ವರ್ಷದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಾವಯವ ಕೃಷಿಗೆ ಹೆಚ್ಚಿನ ಒತ್ತನ್ನು ನೀಡಲಾಗುವುದು. ನಮ್ಮ ಸರ್ಕಾರ ರೈತರ ಜೊತೆ ಸದಾ ಇರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸರ್ಕಾರದಿಂದ ಅನೇಕ ಯೋಜನೆಗಳನ್ನು ನೀಡುತ್ತಿದ್ದರೂ ಈ ಬಗ್ಗೆ ಹೆಚ್ಚಿನವರಿಗೆ ಅರಿವು ಇಲ್ಲ. ಒಂದೇ ವರ್ಷದಲ್ಲಿ ಪುತ್ತೂರು ತಾಲೂಕಿಗೆ 400 ಬೋರ್ ವೆಲ್ ಗಳನ್ನು ಕೊರೆಸಲಾಗಿದೆ. 40 ಸಾವಿರ ಜನರಿಗೆ ಬೆಳೆ ವಿಮೆ ಬರಲು ಬಾಕಿ ಇದೆ. ಕೆಲವರಿಗೆ ಕಡಿಮೆ ಬೆಳೆ ವಿಮೆ ಬಂದಿದೆ. ಈ ಬಗ್ಗೆ ಸಚಿವರು ಸರ್ಕಾರದ ಗಮನ ಸೆಳೆಯಬೇಕು. ರೈತರು ಐದು ವರ್ಷಕ್ಕೆ ಬೇಕಾದಷ್ಟು ಸಾಲ ಮಾಡಿದ್ದಾರೆ. ಈ ನಡುವೆ ರೋಗಗಳಿಂದ ಅಡಿಕೆ ಬೆಳೆಗೆ ಹೊಡೆತ ನೀಡಿದೆ. ಹೀಗಾಗಿ ಸೂಕ್ತ ಬೆಳೆ ವಿಮೆಯನ್ನು ವಿತರಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕರೂ ಆಗಿರುವ ಕೃಷಿ ಮೇಳದ ಸಂಚಾಲಕ ಸಂಜೀವ ಮಠಂದೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿಕನಿಗೆ ಯಾವಾಗಲೂ ಸುಭೀಕ್ಷೆ. ಹೀಗಾಗಿ, ಕೃಷಿಕರಿಗೆ ಸುಭೀಕ್ಷೆ ನೀಡಲು ಈ ಮೇಳ ಆಯೋಜಿಸಲಾಗಿದೆ. ಅಡಿಕೆ, ಕಾಳು ಮೆಣಸು ಇತ್ಯಾದಿಗಳನ್ನು ಬೆಳೆಸುತ್ತಾ ಜೀವನ ಸಾಗಿಸುವ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಅಡಿಕೆ ಈ ಭಾಗದ ಜೀವನಾಡಿ. ಆದರೆ ಎಲೆ ಚುಕ್ಕಿ ರೋಗದಂತಹ ಅನೇಕ ರೋಗಗಳು ಕೃಷಿಗೆ ಹೊಡೆತ ನೀಡಿದೆ. ಪ್ರಾಕೃತಿಕ ವಿಕೋಪದಿಂದಲೂ ಕೃಷಿಗೆ ಹಾನಿಯಾಗಿದೆ. ಕೇರಳದಂತೆ ಬಂಜರು ಭೂಮಿಗೆ ಪ್ರೋತ್ಸಾಹ ಧನ ನೀಡಿದರೆ ಕರ್ನಾಟಕದಲ್ಲೂ ರೈತರು ಬಂಜರು ಭೂಮಿಯಲ್ಲಿ ಕೃಷಿ ಮಾಡಲು ಮುಂದಾಗುತ್ತಾರೆ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ರೈತ ಪರ ಮೇಳವನ್ನು ರೈತರೇ ಇರುವ ಪ್ರದೇಶದಲ್ಲೇ ಆಯೋಜಿಸಲಾಗಿದೆ. ಕೃಷಿಯಿಂದಲೇ ನಾವು ಜೀವನ ಸಾಗಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಆನೆ ದಾಳಿಗಳಿಂದ ಕೃಷಿ ನಾಶವಾಗುತ್ತಿದೆ. ಇನ್ನೊಂದೆಡೆ ಪ್ರಾಕೃತಿಕ ವಿಕೋಪ ಕೃಷಿಗೆ ಹೊಡೆತ ನೀಡುತ್ತಿದೆ. ಕಳೆದ ವರ್ಷದವರೆಗೆ ಸರಿಯಾಗಿ ಬೆಳೆ ವಿಮೆ ಸಿಗುತ್ತಿತ್ತು. ಆದರೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಕಡಿಮೆ ವಿಮೆ ನೀಡಲಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಕೋರಂಗ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮ ಆಯೊಜಿಸಲಾಗಿದೆ. ಮೈಸೂರು ವಿಭಾಗದಲ್ಲಿ ಎಂಟು ಜಿಲ್ಲೆಗಳು ಬರುತ್ತವೆ. ಪ್ರಥಮವಾಗಿ ಕಾರ್ಯಕ್ರಮದ ಆಯೋಜನೆ ಮಾಡುವ ಬಗ್ಗೆ ಪತ್ರ ಬರೆದ ನಮಗೆ ಈ ಕಾರ್ಯಕ್ರಮ ಆಯೋಜಿಸುವ ಅವಕಾಶ ಸಿಕ್ಕಿತು. ಇದು ನಮಗೆ ಸಂತಸ ತಂದಿದೆ. ಇಂತಹ ಮೇಳವನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದರು.
ಕರ್ನಾಟಕ ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ಪದ್ಮನಾಭ ರೈ ಸ್ವಾಗತಿಸಿ, ಕಡಬ ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

