ಮೂಡಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಎಂಬಲ್ಲಿ ಧರ್ಮನೇಮೋತ್ಸವದ ಸಂಭ್ರಮದ ನಡುವೆಯೇ ಭೀಕರ ಅವಘಡವೊಂದು ಸಂಭವಿಸಿದೆ. ದೈವದ ಭಂಡಾರ ಮೆರವಣಿಗೆ ಸಾಗುತ್ತಿದ್ದಾಗ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಿರು ಸೇತುವೆ (ಕಾಲು ಸಂಕ) ಏಕಾಏಕಿ ಕುಸಿದು ಬಿದ್ದ ಪರಿಣಾಮ, ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ಗಾಯಗೊಂಡಿದ್ದಾರೆ.
ಪುಚ್ಚೆಮೊಗರು ಬಾವದಬೈಲು ಎಂಬಲ್ಲಿಂದ ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮೋತ್ಸವಕ್ಕೆ ಭಕ್ತಿ-ಸಂಭ್ರಮದಿಂದ ಕೊಂಡೊಯ್ಯಲಾಗುತ್ತಿತ್ತು. ಕೊಂಬು, ಬ್ಯಾಂಡ್ ವಾದ್ಯಗಳೊಂದಿಗೆ ನೂರಾರು ಭಕ್ತರು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಮೆರವಣಿಗೆಯು ಪುಚ್ಚೆಮೊಗರುವಿನ ಹಳ್ಳವೊಂದಕ್ಕೆ ನಿರ್ಮಿಸಲಾಗಿದ್ದ ಕಿರು ಸೇತುವೆಯನ್ನು ದಾಟುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಇಲ್ಲಿದೆ ನೋಡಿ ವಿಡಿಯೋ:
ಪಲ್ಲಕ್ಕಿಯ ಜೊತೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಏಕಕಾಲಕ್ಕೆ ಸಂಕದ ಮೇಲೆ ಏರಿದ್ದರಿಂದ, ಜನದಟ್ಟಣೆಯ ಭಾರ ತಾಳಲಾರದೆ ಕಿರು ಸೇತುವೆ ಕುಸಿದು ಬಿದ್ದಿದೆ. ಸಂಕ ಮುರಿದ ರಭಸಕ್ಕೆ ಮೇಲ್ಭಾಗದ ಬೀಮ್ (ತೊಲೆ) ನೇರವಾಗಿ ಪಲ್ಲಕ್ಕಿ ಹೊತ್ತವರ ಮೇಲೆಯೇ ಬಿದ್ದಿದೆ.

ಈ ಅವಘಡದಲ್ಲಿ ಪಲ್ಲಕ್ಕಿ ಹೊತ್ತಿದ್ದ ಮಾರೂರಿನ ಸುನಿಲ್ ಶೆಟ್ಟಿ ಮುಕಾಲ್ದಿ, ಲೋಕೇಶ್ ಭಂಡಾರಿ ಸೇರಿದಂತೆ ಒಟ್ಟು ಎಂಟು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಸೇತುವೆ ಕುಸಿದು ಪಲ್ಲಕ್ಕಿ ಉರುಳಿ ಬಿದ್ದ ಪರಿಣಾಮ, ಅದರಲ್ಲಿದ್ದ ದೈವದ ಮೊಗಮೂರ್ತಿ ಹಾಗೂ ಇತರ ಪವಿತ್ರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಅವಘಡದಿಂದಾಗಿ ಧರ್ಮನೇಮೋತ್ಸವದ ಸಂಭ್ರಮದ ಮನೆಯಲ್ಲಿ ಆತಂಕ ಮನೆ ಮಾಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

