ಚಿಕ್ಕಮಗಳೂರು: ಕ್ಷುಲ್ಲಕ ಕಾರಣವೊಂದಕ್ಕೆ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಕೇವಲ ಸಾಂಬಾರ್ ಮಾಡಿಲ್ಲ ಎಂಬ ಕಾರಣಕ್ಕೆ ತಂದೆ ಬೈದಿದ್ದರಿಂದ ಮನನೊಂದ ಯುವತಿ ಈ ನಿರ್ಧಾರ ಕೈಗೊಂಡಿದ್ದಾಳೆ.
ದೇವವೃಂದ ಗ್ರಾಮದ ಸೌಜನ್ಯ ಪೂಜಾರಿ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸೌಜನ್ಯಳ ತಂದೆ ನಟೇಶ್ ಅವರು ಬೆಳಿಗ್ಗೆ ತರಕಾರಿ ತಂದುಕೊಟ್ಟು ಸಾಂಬಾರ್ ಮಾಡುವಂತೆ ಮಗಳಿಗೆ ತಿಳಿಸಿದ್ದರು. ಆದರೆ, ಮಧ್ಯಾಹ್ನ ನಟೇಶ್ ಅವರು ಊಟಕ್ಕೆ ಮನೆಗೆ ಬಂದಾಗ ಸೌಜನ್ಯ ಸಾಂಬಾರ್ ಮಾಡಿರಲಿಲ್ಲ. ಈ ವಿಷಯವಾಗಿ ತಂದೆ ನಟೇಶ್ ಮಗಳಿಗೆ ಬೈದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:Crime : ಪತ್ನಿಯನ್ನು ಹೂತ ಜಾಗದಲ್ಲೇ ನಾಯಿಯ ಶವವನ್ನು ಹೂತು ಯಾಮಾರಿಸಿದ ಪಾಪಿ ಪತಿ
ಮಗಳಿಗೆ ಬೈದ ನಟೇಶ್ ಅವರು, ಸಾಂಬಾರ್ ಇಲ್ಲದ ಕಾರಣ ಪಕ್ಕದ ಮನೆಗೆ ಸಾಂಬಾರ್ ತರಲು ತೆರಳಿದ್ದಾರೆ. ಈ ನಡುವೆ ತಂದೆ ಬೈದಿದ್ದರಿಂದ ತೀವ್ರವಾಗಿ ನೊಂದ ಸೌಜನ್ಯ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಂದೆ ವಾಪಸ್ ಮನೆಗೆ ಬಂದಾಗ ಮಗಳ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಗೋಣಿಬೀಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

