ಶಬರಿಮಲೆ : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಲಕ್ಷಾನುಗಟ್ಟಲೆ ಜನರು ಬರುತ್ತಾರೆ. ವರ್ಷಂಪ್ರತಿ ನಡೆಯುವ ಮಕರ ಸಂಕ್ರಮಣದ ಜ್ಯೋತಿಯ ದಿನದಂದು ಸಾವಿರಕ್ಕಿಂತ ಅಧಿಕ ಮಂದಿ ಅಲ್ಲಿ ಸೇರಿ ದೇವರ ದರ್ಶನ ಮಾಡಿಕೊಳ್ಳುತ್ತಾರೆ. ಹೀಗಾಗಿ ಅನೇಕಾನೇಕ ವರ್ಷಗಳಿಂದ ಭಕ್ತರ ನಂಬಿಕೆಗೆ ಸದಾ ಜೊತೆಯಿರುವ ಈ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಾನದಲ್ಲಿ ಚಿನ್ನ ಕಳುವಿನ ವಿಚಾರವಾಗಿ ತನಿಖೆ ನಡೆಯುತ್ತಲೇ ಇದೆ.
ಶಬರಿಮಲೆ ಪ್ರಧಾನ ಅರ್ಚಕರೇ ಚಿನ್ನ ಕಳುವಿಗೆ ಕಾರಣವಾಗಿದ್ರಾ ?

ದೇವಸ್ಥಾನದಲ್ಲಿ ಚಿನ್ನ ನಾಪತ್ತೆ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ದ್ವಾರಪಾಲಕರ ವಿಗ್ರಹಗಳ ಚಿನ್ನದ ಲೇಪನ ಕಾರ್ಯದ (2019) ಸಂದರ್ಭದಲ್ಲಿ ಸುಮಾರು 4.5 ಕೆಜಿ ಚಿನ್ನದ ಕವಚಗಳು ನಾಪತ್ತೆಯಾಗಿವೆ. ಈ ಸಂಬಂಧ ಕೇರಳ ಹೈಕೋರ್ಟ್ ವಿಶೇಷ ತನಿಖಾ ತಂಡದಿಂದ (SIT) ತನಿಖೆಗೆ ಆದೇಶಿಸಿದ್ದು, ತನಿಖೆ ಬಳ್ಳಾರಿ, ಬೆಂಗಳೂರಿನವರೆಗೂ ತಲುಪಿದೆ. ವಿಜಯ್ ಮಲ್ಯ ದಾನ ನೀಡಿದ್ದ ಚಿನ್ನದ ಲೇಪನದಲ್ಲೇ ಈ ಅವ್ಯವಸ್ಥೆಯಾಗಿದ್ದು, ದಾಖಲೆಗಳಿಲ್ಲದೆ ಚಿನ್ನ ಕೊಂಡೊಯ್ಯಲಾಗಿತ್ತು ಎಂಬ ಆರೋಪಗಳಿವೆ. ಹೀಗಿರುವಾಗ ಇದೀಗ, ಅಯ್ಯಪ್ಪ ಸ್ವಾಮಿ ಸನ್ನಿಧಿಯ ಅಮೂಲ್ಯ ಚಿನ್ನಾಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಶಬರಿಮಲೆ ದೇವಾಲಯದ ಪ್ರಧಾನ ಅರ್ಚಕ (ತಂತ್ರಿ) ಕಂದರಾರು ರಾಜೀವರಾರು ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿದೆ.
ಇದನ್ನೂ ಓದಿ : ವಿಜಯಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ: ಸಿದ್ದರಾಮಯ್ಯ ಘೋಷಣೆ
ತನಿಖೆಯ ಸಂದರ್ಭದಲ್ಲಿ ಸಿಕ್ಕಿರುವ ಸುಳಿವುಗಳು :
ಮೊದಲಿಗೆ, ದೇವಾಲಯದ ಆವರಣದಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಹಲವು ದಿನಗಳಿಂದ ವಿಚಾರಣೆ ನಡೆಸಲಾಗುತ್ತಿತ್ತು. ಈ ತನಿಖೆಯ ಸಂದರ್ಭದಲ್ಲಿ ದೊರೆತ ಕೆಲವು ಸುಳಿವುಗಳು ಮತ್ತು ಸಾಕ್ಷ್ಯಾಧಾರಗಳು ಪ್ರಧಾನ ಅರ್ಚಕರತ್ತ ಬೆರಳು ಮಾಡಿದ್ದವು. ಇದರ ಬೆನ್ನಲ್ಲೇ, ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ಕಂದರಾರು ರಾಜೀವರಾರು ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ದೇವಾಲಯದ ಆವರಣದಿಂದ ನಾಪತ್ತೆಯಾಗಿರುವ ಬೆಲೆಬಾಳುವ ಆಭರಣಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಯ್ಯಪ್ಪ ಸ್ವಾಮಿಗೆ ಅಲಂಕರಿಸಲಾಗುವ ಕೆಲವು ಪುರಾತನ ಮತ್ತು ಪವಿತ್ರ ಆಭರಣಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ದೇವಸ್ವಂ ಮಂಡಳಿಯು ತನಿಖೆಗೆ ಆದೇಶಿಸಿತ್ತು. ಆರಂಭದಲ್ಲಿ ಇದು ಸಾಮಾನ್ಯ ಆಡಳಿತಾತ್ಮಕ ಲೋಪ ಎಂದು ಭಾವಿಸಲಾಗಿತ್ತಾದರೂ, ತನಿಖೆ ಆಳಕ್ಕಿಳಿದಂತೆ ಇದು ವ್ಯವಸ್ಥಿತವಾಗಿ ನಡೆದ ಕಳವು ಎಂಬ ಶಂಕೆ ವ್ಯಕ್ತವಾಗಿ ಕೇರಳದ SIT ತಂಡ ಸತ್ಯದ ಜಾಡನ್ನು ಹುಡುಕುತ್ತಾ ಹೊರಟಿದೆ.
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

