ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ದಂಧೆಯ ಮೇಲೆ ಮಾನ್ವಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಜಾಲದ ಮುಖ್ಯಸ್ಥ (ಕಿಂಗ್‌ಪಿನ್) ತಾಯಪ್ಪ ಸೇರಿದಂತೆ ಒಟ್ಟು 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಿರೇಕೊಟ್ನೆಕಲ್-ಬ್ಯಾಗವಾಟ್ ರಸ್ತೆಯ ಕೆನಾಲ್ ಸಮೀಪದ ಜಮೀನಿನಲ್ಲಿ ಈ ದಂಧೆ ನಡೆಯುತ್ತಿತ್ತು. ಮಾನ್ವಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೋಮಶೇಖರ ಎಸ್. ಕೆಂಚರೆಡ್ಡಿ ನೇತೃತ್ವದಲ್ಲಿ ಶನಿವಾರ ರಾತ್ರಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಈ ಪ್ರಕರಣದ ಪ್ರಮುಖ ಆರೋಪಿ ತಾಯಪ್ಪ ಯಲ್ಲಪ್ಪ ಭೋವಿ ಮಾನ್ವಿ ಪಟ್ಟಣದ ಇಂದಿರಾನಗರ ನಿವಾಸಿಯಾಗಿದ್ದಾನೆ. ಆರೋಪಿ ತಾಯಪ್ಪ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದನು. ಅವರಿಗೆ ಹೆಚ್ಚಿನ ಸಂಬಳದ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ತನ್ನ ಜಾಲಕ್ಕೆ ಸೆಳೆದು, ನಂತರ ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದನು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: Crime: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ದೈಹಿಕ ಶಿಕ್ಷಕನಿಗೆ ಶಿಕ್ಷೆ ಪ್ರಕಟ

ಪೊಲೀಸರು ದಾಳಿಯ ವೇಳೆ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಮಹಿಳೆಯರಿಗೆ ಅಗತ್ಯ ನೆರವು ಮತ್ತು ಪುನರ್ವಸತಿ ಕಲ್ಪಿಸಲು ರಾಯಚೂರಿನ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

