ಮಂಗಳೂರು: ಎಎಸ್‍ಐ ಐತಪ್ಪ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗೆ 7 ವರ್ಷ ಜೈಲು; 9 ವರ್ಷಗಳ ಹಳೆಯ ಕೇಸ್‌ಗೆ ಸಿಕ್ತು ನ್ಯಾಯ!

ಮಂಗಳೂರು: ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-1), ಸುರತ್ಕಲ್‌ನ ಕಾನ ನಿವಾಸಿ ಮೊಹಮ್ಮದ್ ನಿಯಾಜ್ (29) ಎಂಬಾತನಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿದೆ.

ಘಟನೆಯು 2017ರ ಏಪ್ರಿಲ್ 5ರಂದು ನಸುಕಿನ ಜಾವ 3:20ಕ್ಕೆ ಲೇಡಿಹಿಲ್ ಸರ್ಕಲ್ ಬಳಿ ನಡೆದಿತ್ತು. ಊರ್ವ ಠಾಣೆಯ ಎಎಸ್‍ಐ ಐತಪ್ಪ ಅವರು ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ, ಮತ್ತೊಂದು ಬೈಕ್‌ನಲ್ಲಿ ಬಂದ ಶಮೀರ್ ಮತ್ತು ಮೊಹಮ್ಮದ್ ನಿಯಾಜ್ ಅವರನ್ನು ಅಡ್ಡಗಟ್ಟಿದ್ದರು.

Advertisement

ಇದನ್ನೂ ಓದಿ: Crime: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ದೈಹಿಕ ಶಿಕ್ಷಕನಿಗೆ ಶಿಕ್ಷೆ ಪ್ರಕಟ

ಆರೋಪಿ ಶಮೀರ್ ಸೂಚನೆಯಂತೆ, ಹಿಂಬದಿ ಕುಳಿತಿದ್ದ ನಿಯಾಜ್ ಕಬ್ಬಿಣದ ರಾಡ್‌ನಿಂದ ಎಎಸ್‍ಐ ಅವರ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದನು. ಸಾರ್ವಜನಿಕರು ಸ್ಥಳಕ್ಕೆ ಬರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಐತಪ್ಪ ಅವರು ಕೊಲೆ ಯತ್ನದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

Advertisement

ಅಂದಿನ ಎಸಿಪಿ ಉದಯ್ ಎಂ. ನಾಯಕ್ ಅವರು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು ಸೋಮವಾರ ತೀರ್ಪು ಪ್ರಕಟಿಸಿದ್ದು, ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ

ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ 7 ವರ್ಷ ಶಿಕ್ಷೆ ಹಾಗೂ ಒಟ್ಟು 50,000 ರೂ. ದಂಡ. ದಂಡದ ಮೊತ್ತದಲ್ಲಿ 45,000 ರೂಪಾಯಿಯನ್ನು ಗಾಯಾಳು ಎಎಸ್‍ಐ ಐತಪ್ಪ ಅವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣದ ಮೊದಲ ಆರೋಪಿ ಶಮೀರ್ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ಪರಾರಿಯಾಗಿದ್ದಾನೆ. ಆತನ ವಿರುದ್ಧದ ವಿಚಾರಣೆಯನ್ನು ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ. ಸರ್ಕಾರದ ಪರವಾಗಿ ವಕೀಲರಾದ ಹರೀಶ್ಚಂದ್ರ ಉದ್ಯಾವರ ಮತ್ತು ಕೆ. ಬದರಿನಾಥ್ ನಾರಿ ವಾದ ಮಂಡಿಸಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು