ಸುಳ್ಯ: ಕೇಂದ್ರ ಸರ್ಕಾರದ ಮಿಷನ್ ಫಾರ್ ಇಂಟೆಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ (MIDH) ಯೋಜನೆಯಡಿ, ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI) ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ವೈಜ್ಞಾನಿಕ ಕ್ರಮಗಳ ಪ್ರಾತ್ಯಕ್ಷಿಕೆಯನ್ನು ಸುಳ್ಯದ ಗುತ್ತಿಗಾರು ಗ್ರಾಮದಲ್ಲಿ ಅಳವಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಗುತ್ತಿಗಾರು ಗ್ರಾಮದಲ್ಲಿರುವ ಅಡಿಕೆ ಬೆಳೆಗಾರ ಸುಬ್ರಹ್ಮಣ್ಯ ಪ್ರಸಾದ್ ಅವರ ತೋಟಕ್ಕೆ ಇಂದು ಭೇಟಿ ನೀಡಿ, ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಅಳವಡಿಸಿರುವ ಪೋಷಕಾಂಶ ಆಧಾರಿತ ಹಾಗೂ ವೈಜ್ಞಾನಿಕ ವಿಧಾನಗಳ ಪ್ರಗತಿಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿರುವ ಎಲೆಚುಕ್ಕಿ ರೋಗವನ್ನು ಸಮಗ್ರವಾಗಿ ಪರಿಗಣಿಸಿರುವ ಸಂಸದ ಕ್ಯಾ. ಚೌಟ ಅವರು, ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರೋಪಾಯಗಳನ್ನು ಅಳವಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಚನಿಲದಲ್ಲಿರುವ ಸುಬ್ರಹ್ಮಣ್ಯ ಪ್ರಸಾದ್ ಅವರ ತೋಟ ಹಾಗೂ ಸುತ್ತಮುತ್ತಲಿನ ಬೆಳೆಗಾರರ ತೋಟಗಳಿಗೆ CPCRI ಕಾಸರಗೋಡು ನಿರ್ದೇಶಕರಾದ ಡಾ. ಬಾಲಚಂದ್ರ ಹೆಬ್ಬಾರ್, ಕ್ಯಾಂಪ್ಕೋ ಅಧ್ಯಕ್ಷ ಸಹಕಾರ ರತ್ನ ಎಸ್.ಆರ್. ಸತೀಶ್ಚಂದ್ರ, ಕೃಷಿ ವಿಜ್ಞಾನಿಗಳು ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಸಂಸದರು ಮಾತುಕತೆ ನಡೆಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಅಪಮಾನ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಂಸದ ಕ್ಯಾ. ಬ್ರಿಜೇಶ್ ಚೌಟ ವಾಗ್ದಾಳಿ

ಸುಳ್ಯದ ಗುತ್ತಿಗಾರು ಗ್ರಾಮದಲ್ಲಿ ಸುಬ್ರಹ್ಮಣ್ಯ ಪ್ರಸಾದ್ ಅವರ ಒಂದೂವರೆ ಎಕರೆ ಸೇರಿದಂತೆ ಸುತ್ತಮುತ್ತಲಿನ ಅಡಿಕೆ ಬೆಳೆಗಾರರ ಒಟ್ಟು 6 ಎಕರೆಯಲ್ಲಿ CPCRI ವಿಟ್ಲ ಪ್ರಾಂತೀಯ ಕ್ಷೇತ್ರದ ಮಾರ್ಗದರ್ಶನದಲ್ಲಿ ಎಲೆಚುಕ್ಕಿ ರೋಗ ತಡೆಯಲು ಪೋಷಕಾಂಶ ಮತ್ತು ವೈಜ್ಞಾನಿಕ ಕ್ರಮಗಳ ಕುರಿತಂತೆ ಪ್ರಾಯೋಗಿಕ ಅಧ್ಯಯನ ನಡೆಯುತ್ತಿದೆ. ಕಳೆದ ಜೂನ್ ತಿಂಗಳಿಂದಲೇ ತೋಟದಲ್ಲಿ ಕಾಲಕಾಲಕ್ಕೆ ನಿಗಾ ವಹಿಸಿ, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ, ಪ್ರಾತ್ಯಕ್ಷಿಕೆಗಳ ಮೂಲಕ ಪೂರಕ ಅಧ್ಯಯನ ಮುಂದುವರಿಸಲಾಗುತ್ತಿದೆ.
ಎಲೆಚುಕ್ಕಿ ರೋಗ ವ್ಯಾಪಕತೆ ಪತ್ತೆಗೆ ಅಟೋಮ್ಯಾಟಿಕ್ ವೆದರ್ ಸ್ಟೇಷನ್
ಎಲೆ ಚುಕ್ಕಿ ರೋಗವು ಸಾಮಾನ್ಯವಾಗಿ ಮಳೆ ಜಾಸ್ತಿಯಾಗಿ ಅದರ ತೇವಾಂಶದಿಂದ ಗಾಳಿ ಮೂಲಕ ಅಡಿಕೆ ಮರಗಳಿಗೆ ವೇಗವಾಗಿ ಹರಡುತ್ತದೆ. ಮಳೆ ಜಾಸ್ತಿ ಸೇರಿದಂತೆ ಹವಾಮಾನ ಬದಲಾವಣೆ ಕೂಡ ಎಲೆಚುಕ್ಕಿ ರೋಗ ವ್ಯಾಪಕಕ್ಕೆ ಒಂದು ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಪ್ರಸಾದ್ ಅವರ ಅಡಿಕೆ ತೋಟದಲ್ಲಿ ಅಧ್ಯಯನದ ದೃಷ್ಟಿಯಿಂದ ಅಟೋಮ್ಯೆಟಿಕ್ ವೆದರ್ ಸ್ಟೇಷನ್ ಕೂಡ ಅಳವಡಿಸಲಾಗಿದೆ. ಇದರಿಂದ ಎಷ್ಟು ಪ್ರಯಾಣದ ಮಳೆಯಾಗಿದೆ, ತೇವಾಂಶ, ತಾಪಮಾನ ಸೇರಿದಂತೆ ಹವಾಮಾನ ಬದಲಾವಣೆಯಿಂದ ಈ ಎಲೆಚುಕ್ಕಿ ರೋಗ ಯಾವ ರೀತಿ ಹರಡುತ್ತದೆ ಎಂಬುದರ ಅಧ್ಯಯನ ಕೂಡ ಇದರಿಂದ ಸಾಧ್ಯವಾಗಲಿದೆ.
ಇದೇ ವೇಳೆ ಕೃಷಿ ವಿಜ್ಞಾನಿಗಳು ತೋಟಗಳಿಗೆ ನಿರಂತರ ಭೇಟಿ ನೀಡಿ, ಎಲೆಚುಕ್ಕಿ ರೋಗ ತಡೆಯಲು ಬೆಳೆಗಾರರು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾರ್ಗದರ್ಶನ ನೀಡುತ್ತಿದ್ದಾರೆ.
ಈ ಹಿನ್ನೆಲೆ ಗುತ್ತಿಗಾರು ಪ್ರದೇಶದಲ್ಲಿ ನಡೆಯುತ್ತಿರುವ ವೈಜ್ಞಾನಿಕ ಅಧ್ಯಯನದ ಪ್ರಗತಿ ಯಾವ ರೀತಿ ಸಾಗುತ್ತಿದೆ ಹಾಗೂ ರೈತರಿಗೆ ನೀಡಲಾಗುತ್ತಿರುವ ಸಲಹೆ-ಸೂಚನೆಗಳ ಕುರಿತು ಪರಿಶೀಲನೆ ನಡೆಸಲು ಸಂಸದ ಕ್ಯಾ. ಚೌಟ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪ್ರಾತ್ಯಕ್ಷಿಕೆ ಕಾರ್ಯವನ್ನು ವೀಕ್ಷಿಸಿದರು. ಅಲ್ಲದೇ CPCRI ಹಾಗೂ ICAR ಸಂಸ್ಥೆಗಳ ಕೃಷಿ ವಿಜ್ಞಾನಿಗಳು, ಪರಿಣತರು ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸಿ ಹೆಚ್ಚಿನ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ CPCRI ವಿಟ್ಲದ ರಾಜೇಶ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಮುಖಂಡರಾದ ವೆಂಕಟ್ ದಂಬೆಕೋಡಿ, ಕೇಶವ ಭಟ್ ಮುಳಿಯ, ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ಅಡಿಕೆ ಬೆಳೆಗಾರರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

