ಪುತ್ತೂರು: ನಗರದಲ್ಲಿ ಕಾರ್ಯಚರಿಸುತ್ತಿರುವ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳರವರು ಗುರುವಾರ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಆಶೀರ್ವಚವನ ನೀಡಿದರು.
ಎಲ್ಲ ಮತಗಳಲ್ಲೂ ಒಳ್ಳೆಯವರಿದ್ದಾರೆಂಬುದು ಸತ್ಯ. ಆದರೆ ಒಳ್ಳೆಯವರನ್ನು ಮುಂದೆ ತೋರಿಸಿ, ಇರುವವರೆಲ್ಲರೂ ಒಳ್ಳೆಯವರೆಂಬ ಭಾವ ಮೂಡಿಸಿ, ಹಿಂದಿನಿಂದ ತಮ್ಮ ಕೆಟ್ಟ ಕೆಲಸಗಳನ್ನು ಮಾಡಿಕೊಳ್ಳುವ ಮಂದಿ ಹಲವರಿದ್ದಾರೆ. ಅಂತಹವರ ಬಗೆಗೆ ಎಲ್ಲರೂ ಜಾಗರೂಕರಾಗಿರಬೇಕು. ಅಂತಹವರಿಂದ ನಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಮೂಲಕ ಹಿಂದೂ ಧರ್ಮವನ್ನು ಉಳಿಸಿಕೊಳ್ಳಬೇಕಿದೆ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಹೇಳಿದರು.
ಸಿಂಹದ ಸಾಮರ್ಥ್ಯವನ್ನು ಆನೆಯಲ್ಲಿ ಕೇಳಬೇಕೇ ವಿನಃ ಇಲಿಯಲ್ಲಿ ಕೇಳಬಾರದು. ವಸಂತ ಋತುವಿನ ಶ್ರೇಷ್ಟತೆಯನ್ನು ಕೋಗಿಲೆಯ ಕಂಠದಲ್ಲಿ ಕೇಳಬೇಕು, ಕಾಗೆಯ ಬಾಯಿಯಿಂದಲ್ಲ. ಹಾಗೆಯೇ ಸನಾತನ ಧರ್ಮದ ಉತ್ಕೃಷ್ಟತೆಯನ್ನು ಧರ್ಮದ ತಿರುಳನ್ನರಿತ ಪ್ರಾಜ್ಞರಿಂದ ಅರಿತುಕೊಳ್ಳಬೇಕೇ ವಿನಃ ಅರೆಬರೆ ತಿಳಿದವರಿಂದಲ್ಲ. ನಮ್ಮ ಧರ್ಮ ನಮಗೆ ಅತ್ಯುತ್ತಮ ಸಂಸ್ಕಾರವನ್ನು ಒದಗಿಸಿಕೊಡುತ್ತಿದೆ. ಧಾಮಿಕ ಸಂಸ್ಕಾರವನ್ನು ಮಕ್ಕಳಿಗೆ ಕೊಟ್ಟಾಗ ಅವರು ಸದಾ ಒಳ್ಳೆಯ ಹಾದಿಯಲ್ಲಿರುತ್ತಾರೆ ಮತ್ತು ಎತ್ತರಕ್ಕೆ ಬೆಳೆಯುತ್ತಾರೆ. ಸಂಸ್ಕಾರಹೀನನನ್ನು ಪ್ರಪಂಚ ಒಪ್ಪುವುದಿಲ್ಲ ಎಂದು ಆಶಿರ್ವಚಿಸಿದರು.
ನಾಸ್ತಿಕರು ಹಾಗೂ ನಾಸ್ತಿಕರೆಂದು ಹೆಸರಿಟ್ಟುಕೊಂಡವರೆಂಬ ಎರಡು ಪ್ರಭೇದಗಳಿವೆ. ನಿಜವಾದ ನಾಸ್ತಿಕರಿಗೆ ನಮ್ಮ ಧರ್ಮದಲ್ಲೇ ಸ್ಥಾನವಿದೆ. ನೈಜ ನಾಸ್ತಿಕರು ಎಲ್ಲಾ ಮತ – ಧರ್ಮಗಳ ನ್ಯೂನತೆಗಳನ್ನೂ ಎತ್ತಿ ತೋರಿಸುತ್ತಾ ಬಂದರೆ, ನಾಸ್ತಿಕರೆಂದು ಹೆಸರಿಟ್ಟುಕೊಂಡವರು ಹಿಂದೂ ಧರ್ಮದ ಬಗೆಗೆ ಟೀಕಿಸುವುದಕ್ಕೆ ತೊಡಗುತ್ತಾರೆ. ಅವರಿಗೆ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಅನ್ಯಾಯಗಳು ಕಾಣುತ್ತವೆ, ಬೇರೆ ಧರ್ಮದ ಯಾವುದೇ ಹುಳುಕುಗಳು ಅವರಿಗೆ ಕಾಣಿಸುವುದಿಲ್ಲ. ಇಂತಹವರ ಬಗೆಗೆ ಗಮನ ಇಡಬೇಕು ಎಂದರು.
ಇದನ್ನೂ ಓದಿ: ಜೈಲಿನಲ್ಲೇ ಮಕ್ಕಳಿಗೆ ಶಾಲೆ, ಸುರಕ್ಷತೆ: ಕರ್ನಾಟಕ ಸರ್ಕಾರದ ಹೊಸ ಹೆಜ್ಜೆ
ದೇಶ – ಧರ್ಮಗಳೆರಡೂ ಸದಾ ಉತ್ತಮ ಸ್ಥಿತಿಯಲ್ಲಿರುವಂತೆ ನಾವು ನೋಡಿಕೊಳ್ಳಬೇಕು. ಹಿಮದೂ ಸಮಾಜ ಸದಾ ಜಾಗೃತ ಸ್ಥಿತಿಯಲ್ಲಿರಬೇಕು. ಹಿಂದೂ ಧರ್ಮದ ಬಗೆಗೆ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಆದರೆ ಆ ಸುಳ್ಳುಗಳು ಸುಳ್ಳು ಎಂದು ಹಿಂದೂಗಳಿಗೇ ಅರಿವಾಗುತ್ತಿಲ್ಲ. ಇಲ್ಲಿಯವರೆಗೆ ನಮ್ಮ ಧರ್ಮಕ್ಕಾದ ಹಾನಿಯೇ ಸಾಕು. ಇನ್ನು ಮುಂದೆಯೂ ಅದು ಮುಂದುವರೆಯದತೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸೂಚಿಸಿದರು.
ನಮ್ಮ ನೇತಾರನನ್ನು ಆಯ್ಕೆ ಮಾಡುವಾಗ ಆತನನಿಗೆ ಧರ್ಮಶ್ರದ್ಧೆ ಇದೆಯಾ ಎಂಬುದನ್ನು ಗಮನಿಸಬೇಕು. ಕೇವಲ ಇಂತಹವರ ತಮ್ಮ, ಅಂತಹವರ ಮಗ ಎಂಬ ಕಾರಣಕ್ಕೆ ಆಯ್ಕೆ ಮಾಡಬಾರದು. ಧರ್ಮಕ್ಕೆ ಕೊಡುಗೆ ಕೊಡಲಾಗದಿದ್ದರೂ ಹಾನಿ ಮಾಡದವನನ್ನು ಆಯ್ಕೆ ಮಾಡಿದಾಗ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದರಲ್ಲದೆ ದುರ್ವಿನಿಯೋಗವಾಗದ ಏಕೈಕ ಸಂಗತಿಯೆAದರೆ ಸಂಸ್ಕಾರ ಎಂದು ನುಡಿದರು.
ಶಂಖನಾದ ಹಾಗೂ ವೇದಘೋಷವನ್ನು ನಡೆಸಿಕೊಡಲಾಯಿತು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು. ಗುರುವಂದನಾ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ ಸ್ವಾಗತಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಪ್ರಸ್ತಾವನೆಗೈದರು. ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ಅಭಿವಂದನಾ ನುಡಿಗಳನ್ನಾಡಿದರು. ತಾಲೂಕು ಧರ್ಮ ಶಿಕ್ಷಣ – ಧರ್ಮಾಭ್ಯುದಯದ ವಿದ್ಯಾರ್ಥಿಗಳಿಂದ ಸಮರ್ಪಣಮ್ ಕಾರ್ಯಕ್ರಮ ನಡೆಯಿತು.
ಬಪ್ಪಳಿಗೆ ಅಂಬಿಕಾ ಆವರಣದಲ್ಲಿ ರೂಪಿಸಲಾದ ಭಾರತಮಾತೆಯ ಉಬ್ಬುಶಿಲ್ಪವನ್ನು ಜಗದ್ಗುರುಗಳು ಅನಾವರಣಗೊಳಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸ್ಮರಣ ಸಂಚಿಕೆ ಹಾಗೂ ಶೃಂಗೇರಿಯ ಬಗೆಗೆ ಮಾಹಿತಿಯುಳ್ಳ ಶೃಂಗೇರಿಯ ಹಿರಿಮೆ ಕೃತಿಯನ್ನು ಜಗದ್ಗುರುಗಳು ಅನಾವರಣಗೊಳಿಸಿದರು. ಅಂಬಿಕಾ ನಡೆದು ಬಂದ ಹಾದಿಯ ಬಗೆಗಿನ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಅಂಬಿಕಾ ವತಿಯಿಂದ ರೂಪಿಸಲಾದ ನಾವಿಕ – ಹಿಂದೂ ಸಂಪರ್ಕ ಸಾರಿಗೆ ಎಂಬ ಮೊಬೈಲ್ ಆಪ್ ಅನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಗುರುವಂದನಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಭಿವಂದನಾ ಪತ್ರ, ಸ್ಮರಣಿಕೆಗಳನ್ನು ಜಗದ್ಗುರುಗಳಿಗೆ ಸಮರ್ಪಿಸಲಾಯಿತು. ಸುಬ್ರಮಣ್ಯ ನಟ್ಟೋಜ ಹಾಗೂ ಕುಟುಂಬಸ್ಥರು ಶಾರದಾಮಾತೆಯ ಪುತ್ಥಳಿಯನ್ನು ಗುರುಚರಣಗಳಿಗೆ ಅರ್ಪಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಡಾ.ಎಂ.ಎಸ್.ಶೆಣೈ, ಇನ್ನಿತರ ಸದಸ್ಯರು, ಗುರುವಂದನಾ ಸಮಿತಿಯ ಗೌರವಾಧ್ಯಕ್ಷ ಮೊಗೆರೋಡಿ ಬಾಲಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ, ಖಜಾಂಜಿ ಕಾವು ಹೇಮನಾಥ ಶೆಟ್ಟಿ, ಕಾರ್ಯಾಧ್ಯಕ್ಷ ಶಿವರಾಮ ಆಳ್ವ, ಸಂಚಾಲಕ ಡಾ.ಸುರೇಶ್ ಪುತ್ತೂರಾಯ, ಕಾರ್ಯದರ್ಶಿ ಸಾಜ ರಾಧಾಕೃಷ್ಣ ಆಳ್ವ, ಸಂಘಟನಾ ಕಾರ್ಯದರ್ಶಿ ದಿನೇಶ್ ಜೈನ್, ಸಂಯೋಜಕ ಮಾಧವ ಸ್ವಾಮಿ, ಜತೆ ಕಾರ್ಯದರ್ಶಿಗಳಾದ ಸುರೇಶ್ ಕೆಮ್ಮಿಂಜೆ ಹಾಗೂ ನವೀನ್ ಕುಲಾಲ್, ಸಹಸಂಚಾಲಕ ಗಿರಿಶಂಕರ ಸುಲಾಯ, ಗೌರವ ಸಲಹೆಗಾರ ಎನ್.ಕೆ.ಜಗನ್ನಿವಾಸ ರಾವ್, ಪದಾಧಿಕಾರಿಗಳು, ಸದಸ್ಯರು ಮತ್ತು ಧರ್ಮಾಭ್ಯುದಯದ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಇತರ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ ಹಾಗೂ ಸಂಜೀವ ಮಠಂದೂರು ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಶಂಕರ ಜಯಂತಿ ಪ್ರಯುಕ್ತ ಪುತ್ತೂರು ಹಾಗೂ ಸುತ್ತಮುತ್ತಲಿನ ಆರು ತಾಲೂಕುಗಳ ವಿದ್ಯಾರ್ಥಿಗಳಿಗಾಗಿ ಶೃಂಗೇರಿ ಪೀಠದಿಂದ ಇತ್ತೀಚೆಗೆ ಆಯೋಜಿಸಲಾದ ಶಂಕರ ವಿಜಯ ಸ್ಪರ್ಧೆಗಳಲ್ಲಿ ಗೆಲುವು ಪಡೆದವರಿಗೆ ಹಾಗೂ ಅತ್ಯುತ್ತಮ ಪ್ರದರ್ಶನ ತೋರಿದವರಿಗೆ ಶ್ರೀಗಳು ಬಹುಮಾನ ವಿತರಿಸಿದರು. ಹಿರಿಯರ ಭಾಷಣ ಸ್ಪರ್ಧೆ ವಿಜೇತರಾದ ಸಿಂಚನಾ ಕಲ್ಲೂರಾಯ ಹಾಗೂ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅಭಿನವರಾಜ್ ಎನ್. ಭಾಷಣವನ್ನು ಶ್ರೀಗಳ ಮುಂದೆ ಪ್ರಸ್ತುತಪಡಿಸಿದರು. ಅಂಬಿಕಾ ವತಿಯಿಂದ ಆಯೋಜಿಸಲಾಗಿದ್ದ ಶ್ಲೋಕಭಾರತೀ ಸ್ಪರ್ಧೆಯ ವಿಜೇತರಿಗೆ ಬಾಲಭಾರತಿ ಪ್ರಶಸ್ತಿ ವಿತರಿಸಲಾಯಿತು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶೃಂಗೇರಿ ಮಠದ ಶಾಂಕರ ತತ್ವ ಪ್ರಸಾರ ಅಭಿಯಾನದ ರಾಜ್ಯ ಸಂಚಾಲಕ ವಿದ್ವಾನ್ ತೇಜಶಂಕರ ಸೋಮಯಾಜಿ ಅಭಿವಂದನಾ ಪತ್ರ ವಾಚಿಸಿದರು.
ತೊಟ್ಟಿಲಕಯದಲ್ಲಿ ಚಂಡಿಕಾಹೋಮ: ಇದಕ್ಕೂ ಪೂರ್ವದಲ್ಲಿ ಗುರುವಾರ ಬೆಳಗ್ಗೆ ಎಂಟು ಗಂಟೆಯ ಸುಮಾರಿಗೆ ಬಲ್ನಾಡು ಶ್ರೀ ಉಳ್ಳಾಲ್ತಿಯ ಮೂಲಸ್ಥಾನವಾದ ತೊಟ್ಟಿಲಕಯದ ಶ್ರೀ ಉಳ್ಳಾಲ್ತಿ ಅಮ್ಮನವರ ಸ್ಥಾನದಲ್ಲಿ ಚಂಡಿಕಾಹೋಮ ಸಂಪನ್ನಗೊಂಡಿತು. ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಪೂರ್ಣಾಹುತಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಎಲ್ಲರಿಗೂ ಪ್ರಸಾದ ಭೋಜನವನ್ನು ನೀಡಲಾಯಿತು.
ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ


