ತಮಿಳುನಾಡು ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ, ಕೈ ಕಾರ್ಯಕರ್ತರನ್ನು ಅಟ್ಟಾಡಿಸಿ ಓಡಿಸಿದ ಡಿಎಂಕೆ ಕಾರ್ಯಕರ್ತರು

Tamilnadu Congress vs DMK

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವಿರುದ್ಧ ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸಿದರು. ಇತ್ತ, ಪ್ರತಿಭಟನೆ ಮುಗಿಸಿ ಹೋಗುತ್ತಿದ್ದ ಕೈ ಕಾರ್ಯಕರ್ತರನ್ನು ಕಾಂಗ್ರೆಸ್‌ನ ಮಿತ್ರಪಕ್ಷ ಡಿಎಂಕೆ ಕಾರ್ಯಕರ್ತರು ಅಟ್ಟಾಡಿಸಿ ಹಲ್ಲೆ ನಡೆಸಿ ಓಡಿಸಿದ ಘಟನೆಯೂ ನಡೆದಿದೆ.

ರಾಜ್ಯಪಾಲರು ಟಿವಿಕೆ (TVK) ಮುಖ್ಯಸ್ಥ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್, ಚೆನ್ನೈ, ಮಧುರೈ, ಕೊಯಮತ್ತೂರು ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿತು.

ಈ ವಿಳಂಬ ರಾಜಕೀಯ ಅಸ್ಥಿರತೆಗೆ ಅವಕಾಶ ಕಲ್ಪಿಸುತ್ತಿದ್ದು, ಶಾಸಕರ ಸೆಳೆಯುವ (ಕುದುರೆ ವ್ಯಾಪಾರ) ಪ್ರಯತ್ನಗಳಿಗೆ ದಾರಿ ಮಾಡಿಕೊಡಬಹುದು ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ

ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ, ರಾಜ್ಯಪಾಲರ ಕಚೇರಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಭಾವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯಪಾಲರು ಅತಿದೊಡ್ಡ ಪಕ್ಷವನ್ನು ತಕ್ಷಣ ಸರ್ಕಾರ ರಚನೆಗೆ ಆಹ್ವಾನಿಸದೆ ಸಾಂವಿಧಾನಿಕ ಸಂಪ್ರದಾಯಗಳನ್ನು ಪಾಲಿಸಲು ವಿಫಲರಾಗಿದ್ದಾರೆ ಎಂದು ಅವರು ಟೀಕಿಸಿದರು.

ತಮಿಳುನಾಡು ಎಐಸಿಸಿ ಉಸ್ತುವಾರಿ ಗಿರೀಶ್ ಚೋಡಂಕರ್ ಕೂಡ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿ, ಸರ್ಕಾರ ರಚನೆಯಲ್ಲಿ ಉಂಟಾಗಿರುವ ವಿಳಂಬ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು. ರಾಜ್ಯಪಾಲರಿಗೆ ತಮ್ಮದೇ ಆದ ಧ್ಯೇಯವಿದೆ. ಆದರೆ ಅವರು ಅಮಿತ್ ಶಾ ಅವರ ಮಾರ್ಗಸೂಚಿಯಂತೆ ನಡೆದುಕೊಳ್ಳುತ್ತಿದ್ದಾರೆ. ಅದೇ ಸಮಸ್ಯೆ ಎಂದು ಚೋಡಂಕರ್ ಹೇಳಿದ್ದಾರೆ.

ಟಿವಿಕೆ–ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ರಚಿಸುವುದನ್ನು ತಡೆಯಲು ಡಿಎಂಕೆ ಮತ್ತು ಎಐಎಡಿಎಂಕೆ ಪರೋಕ್ಷವಾಗಿ ಒಂದಾಗಬಹುದು ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅವರು ಒಟ್ಟಿಗೆ ಬರಲಿ. ತಮಿಳುನಾಡಿನ ಜನರ ಮುಂದೆ ಎಲ್ಲರ ರಾಜಕೀಯ ನಿಲುವು ಬಹಿರಂಗವಾಗಲಿ” ಎಂದು ಹೇಳಿದರು.

ಹಲವಾರು ಜಾತ್ಯತೀತ ಪಕ್ಷಗಳು ಪರೋಕ್ಷ ರಾಜಕೀಯ ತಂತ್ರಗಳ ಮೂಲಕ ರಾಜ್ಯದಲ್ಲಿ ಬಿಜೆಪಿ ಅಥವಾ ಆರ್‌ಎಸ್‌ಎಸ್ ಪ್ರಭಾವ ಹೆಚ್ಚಲು ಅವಕಾಶ ನೀಡುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಚುನಾವಣೆಯ ಬಳಿಕ ವಿಜಯ್ ಅವರ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ತನ್ನ ಹಿಂದಿನ ಮಿತ್ರ ಡಿಎಂಕೆಗೆ ‘ಬೆನ್ನು ಇರಿದಿದೆ’ ಎಂಬ ಟೀಕೆಗಳನ್ನು ತಳ್ಳಿಹಾಕಿದ ಚೋಡಂಕರ್, “ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ತೀರ್ಪುಗಾರರು. ನಾವು ಜನರ ಆದೇಶವನ್ನು ಗೌರವಿಸಿದ್ದೇವೆ” ಎಂದರು.

ಕಾಂಗ್ರೆಸ್‌ ಕಾರ್ಯಕರ್ತರನ್ನು ಅಟ್ಟಾಡಿಸಿದ ಡಿಎಂಕೆ ಕಾರ್ಯಕರ್ತರು

ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಮೈಲಾಡುತುರೈನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಮತ್ತು ಡಿಎಂಕೆ ಕಾರ್ಯಕರ್ತರ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ರಾಜ್ಯಪಾಲರು ಹೊಸ ಸರ್ಕಾರ ರಚನೆಗೆ ಟಿವಿಕೆ ನಾಯಕ ವಿಜಯ್ ಅವರನ್ನು ಆಹ್ವಾನಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಘಟಕವು ಜಿಲ್ಲಾ ಅಧ್ಯಕ್ಷ ಎಸ್. ಭಾನುಶೇಖರ್ ನೇತೃತ್ವದಲ್ಲಿ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿತ್ತು.

ಇದನ್ನೂ ಓದಿ: ಲೋಕಸಭೆಯಲ್ಲಿ ಪ್ರತ್ಯೇಕ ಆಸನಕ್ಕೆ ಡಿಎಂಕೆ ಮನವಿ ಅಖಿಲೇಶ್ ಗುಪ್ತ ಸಂದೇಶದಿಂದ ವಿರೋಧ ಪಕ್ಷಗಳಲ್ಲಿ ಚರ್ಚೆ

ಪ್ರತಿಭಟನೆ ಮುಗಿದ ಬಳಿಕ, ಕಾಂಗ್ರೆಸ್ ಕಾರ್ಯಕರ್ತರು ತೆರಳುತ್ತಿದ್ದ ವೇಳೆ ಡಿಎಂಕೆ ಕಾರ್ಯಕರ್ತರ ಗುಂಪೊಂದು ಸ್ಥಳಕ್ಕೆ ಬಂದು ವಾಗ್ವಾದಕ್ಕೆ ಇಳಿದಿದೆ ಎನ್ನಲಾಗಿದೆ. 11 ವರ್ಷಗಳ ಬಳಿಕ ಡಿಎಂಕೆ ಮೈತ್ರಿಕೂಟದಿಂದ ಕಾಂಗ್ರೆಸ್ ಹೊರಬಂದಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಡಿಎಂಕೆ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರನ್ನು ಬೆನ್ನಟ್ಟಿ ಓಡಿಸಿದರೆಂದು ವರದಿಯಾಗಿದೆ.

ಈ ವೇಳೆ ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಲಾಗಿದ್ದು, ಕಾಂಗ್ರೆಸ್ ಪಕ್ಷದ ಧ್ವಜಗಳಿಗೂ ಹಾನಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ದಿನಗಳಿಂದ ಸ್ಥಳೀಯ ಕಾಂಗ್ರೆಸ್ ಮತ್ತು ಡಿಎಂಕೆ ಕಾರ್ಯಕರ್ತರ ನಡುವೆ ಅಸಮಾಧಾನವಿದ್ದುದಾಗಿ ಮೂಲಗಳು ತಿಳಿಸಿವೆ. ಮೈಲಾಡುತುರೈ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಜಮಾಲ್ ಮುಹಮ್ಮದ್ ಯೂನೂಸ್ ಅವರ ಗೆಲುವಿಗೆ ಡಿಎಂಕೆ ಪ್ರಮುಖ ಪಾತ್ರ ವಹಿಸಿದೆ ಎಂಬ ಅಭಿಪ್ರಾಯ ಡಿಎಂಕೆ ಕಾರ್ಯಕರ್ತರಲ್ಲಿದೆ ಎನ್ನಲಾಗಿದೆ.

ಈ ಸಂಬಂಧ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆದರೆ ಮೈಲಾಡುತುರೈ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು