ನೀಟ್ ಪೇಪರ್ ಲೀಕ್ ಪ್ರಕರಣ: ಮಹಿಳೆ ಬಂಧನ

ಪುಣೆ: ದೇಶಾದ್ಯಂತ ಸಂಚಲನ ಮೂಡಿಸಿರುವ  ನೀಟ್ – ಯುಜಿ (NEET-UG 2026) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ನಂತರ ಸಿಬಿಐಗೆ ಹಸ್ತಾಂತರಿಸಿದ್ದು, ಹಲವು ರಾಜ್ಯಗಳಿಗೆ ಸಂಪರ್ಕ ಹೊಂದಿರುವ ದೊಡ್ಡ ಜಾಲದ ಶಂಕೆ ವ್ಯಕ್ತವಾಗಿದೆ.

ಪುಣೆಯ ಬಿಬ್ವೇವಾಡಿ ಪ್ರದೇಶದಲ್ಲಿ ವಾಸವಾಗಿದ್ದ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಯಿತು. ಆಕೆ ವಿದ್ಯಾರ್ಥಿಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ನಡುವೆ ಸಂಪರ್ಕ ಸಾಧಿಸುವ  ಸಮನ್ವಯಕಾರಳಾಗಿ ಕಾರ್ಯನಿರ್ವಹಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಪ್ರಾಥಮಿಕ ವಿಚಾರಣೆ ಬಳಿಕ ಆಕೆಯನ್ನು ಮುಂದಿನ ತನಿಖೆಗಾಗಿ ಕೇಂದ್ರ ತನಿಖಾ ದಳ (CBI)ಕ್ಕೆ ಒಪ್ಪಿಸಲಾಗಿದೆ ಎಂದು ಪುಣೆ ನಗರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ ಪ್ರಧಾನಿ ಮೋದಿ ನೀಡಿದ ’10 ಮಂತ್ರ’ಗಳ ಹಿಂದಿನ ರಹಸ್ಯವೇನು? ದೇಶಕ್ಕೆ ಎದುರಾಗಿದೆಯೇ ಆರ್ಥಿಕ ವಿಪತ್ತು?

ಈ ಪ್ರಕರಣವು ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಾಗಿಲ್ಲ. ರಾಜಸ್ಥಾನ, ಹರಿಯಾಣ, ಉತ್ತರಾಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಜಾಲ ಕಾರ್ಯನಿರ್ವಹಿಸಿದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಕೆಲ ವರದಿಗಳ ಪ್ರಕಾರ, ಗಸ್ ಪೇಪರ್ ಎಂಬ ಹೆಸರಿನಲ್ಲಿ ನಿಜವಾದ ಪ್ರಶ್ನೆಪತ್ರಿಕೆಗಳನ್ನು ₹10 ಲಕ್ಷದಿಂದ ₹25 ಲಕ್ಷದವರೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಮಹಾರಾಷ್ಟ್ರದ ಕೆಲವು ಕೋಚಿಂಗ್ ಸೆಂಟರ್‌ಗಳ ಮೇಲೂ ಅನುಮಾನ ವ್ಯಕ್ತವಾಗಿದೆ. ಕೆಲವು ವಿದ್ಯಾರ್ಥಿಗಳು ಹಾಗೂ ಪೋಷಕರು ನೀಡಿದ ದೂರಿನ ಪ್ರಕಾರ, ಮಾಕ್ ಟೆಸ್ಟ್‌ನಲ್ಲಿ ಕೇಳಲಾಗಿದ್ದ ಅನೇಕ ಪ್ರಶ್ನೆಗಳು (NEET)ನೀಟ್ – ಯುಜಿ ಪರೀಕ್ಷೆಯಲ್ಲಿಯೂ ಕಾಣಿಸಿಕೊಂಡಿವೆ. ಇದರಿಂದ ಕೋಚಿಂಗ್ ಸಂಸ್ಥೆಗಳು ಮತ್ತು ಸೋರಿಕೆ ಜಾಲದ ನಡುವೆ ಸಂಬಂಧ ಇದೆಯೇ ಎಂಬ ದಿಕ್ಕಿನಲ್ಲಿ ತನಿಖೆ ಸಾಗುತ್ತಿದೆ.

ಇದನ್ನೂ ಓದಿ ಸಮವಸ್ತ್ರ ವಿವಾದಕ್ಕೆ ಹೊಸ ತಿರುವು: ಹಿಜಾಬ್, ಜನಿವಾರಕ್ಕೆ ಅವಕಾಶ; ಕೇಸರಿ ಶಾಲ್ ಬಗ್ಗೆ ಮುಂದುವರಿದ ಗೊಂದಲ!

ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಗಂಭೀರವಾಗುತ್ತಿದ್ದಂತೆ ಮೇ 3ರಂದು ನಡೆದಿದ್ದ ನೀಟ್ – ಯುಜಿ (NEET-UG 2026) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರದ್ದುಗೊಳಿಸಿತು. ಇದರಿಂದ ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಮರುಪರೀಕ್ಷೆಯ ದಿನಾಂಕ, ಹೊಸ ಪ್ರವೇಶ ಪತ್ರಗಳು ಹಾಗೂ ಕೌನ್ಸೆಲಿಂಗ್ ವೇಳಾಪಟ್ಟಿ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಹೊರಬಂದಿಲ್ಲ.

ಸಿಬಿಐ ಈಗಾಗಲೇ ವಿಶೇಷ ತನಿಖಾ ತಂಡಗಳನ್ನು ರಚಿಸಿ ದೇಶದ ವಿವಿಧ ಭಾಗಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದೆ. ಈ ಅಕ್ರಮದ ಹಿಂದೆ ದೊಡ್ಡ ಮಟ್ಟದ ಪೇಪರ್ ಲೀಕ್ ಮಾಫಿಯಾ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಇನ್ನಷ್ಟು ಬಂಧನಗಳ ಸಾಧ್ಯತೆಯೂ ಇದೆ.

ದೇಶದ ಸುದ್ದಿ ಮತ್ತಷ್ಟೂ ಓದಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು