ಮಣಿಪಾಲದಲ್ಲಿ ಆಘಾತಕಾರಿ ಘಟನೆ: ಆರ್ಥಿಕ ತೊಂದರೆಗಾಗಿ ಪಕ್ಕದ ರೂಮಿನ ಯುವತಿಯ ತಲೆಗೆ ಕಲ್ಲಿನಿಂದ ಜಜ್ಜಿ ಚಿನ್ನ ದೋಚಿದ ಮಹಿಳೆ ಬಂಧನ!

ಉಡುಪಿ: ಹಣಕಾಸಿನ ತೀವ್ರ ತೊಂದರೆಯಿಂದಾಗಿ ಪಕ್ಕದ ಕೋಣೆಯಲ್ಲಿದ್ದ ಯುವತಿಯ ತಲೆಗೆ ಕಾಂಕ್ರೀಟ್ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿ, ಆಕೆಯ ಚಿನ್ನಾಭರಣಗಳನ್ನು ದೋಚಿದ್ದ ಆಘಾತಕಾರಿ ಪ್ರಕರಣವೊಂದನ್ನು ಮಣಿಪಾಲ ಪೊಲೀಸರು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮದ ನಿವಾಸಿ ಸುಷ್ಮಾ ಅಣ್ಣಪ್ಪ ನಾಯಕ್ (31) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ದೂರುದಾರೆ ಮೇಘಾ ಗೌಡ ತನ್ನ ಸ್ನೇಹಿತರಾದ ನಾಗರತ್ನ, ಗಗನ ಮತ್ತು ಯೋಗಿತಾ ಅವರೊಂದಿಗೆ ಮಣಿಪಾಲದ ಶಾಂತಿನಗರದ ಬಾಡಿಗೆ ಕೋಣೆಯೊಂದರಲ್ಲಿ ವಾಸಿಸುತ್ತಿದ್ದರು. ಮೇ 12 ರಂದು ಮೇಘಾ, ನಾಗರತ್ನ ಮತ್ತು ಗಗನ ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರು. ಮೇ 13 ರಂದು ಬೆಳಗ್ಗೆ 7:15 ಕ್ಕೆ ಕೆಲಸ ಮುಗಿಸಿ ರೂಮ್‌ಗೆ ವಾಪಸ್ ಬಂದಾಗ ಬಾಗಿಲು ಅರ್ಧ ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಯೋಗಿತಾ ತಲೆಗೆ ತೀವ್ರ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಹಾಗೂ ಆಕೆಯ ಚಿನ್ನದ ಸರ ಕಾಣೆಯಾಗಿತ್ತು. ತಕ್ಷಣ ಆಕೆಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ವಿಶೇಷ ತಂಡದಿಂದ ತನಿಖೆ:

ಪ್ರಕರಣದ ಗಂಭೀರತೆಯನ್ನು ಅರಿತ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ, ಮಣಿಪಾಲ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಶಂಕಿತರನ್ನು ವಿಚಾರಣೆ ನಡೆಸಿದಾಗ ಪಕ್ಕದ ರೂಮಿನ ಸುಷ್ಮಾ ಸಿಕ್ಕಿಬಿದ್ದಿದ್ದಾಳೆ.

ಇದನ್ನೂ ಓದಿ: Crime: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ದೈಹಿಕ ಶಿಕ್ಷಕನಿಗೆ ಶಿಕ್ಷೆ ಪ್ರಕಟ

ಸ್ನೇಹಿತೆಯಂತೆ ಮಲಗಿ ಬೆಳ್ಳಂಬೆಳಗ್ಗೆಯೇ ಕೃತ್ಯ:

ಬಂಧಿತ ಸುಷ್ಮಾ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಳು. ಕಳೆದ ಮೂರು ವರ್ಷಗಳಿಂದ ಊರಿಗೆ ಹಣ ಕಳುಹಿಸದ ಕಾರಣ ಆಕೆಯ ಕುಟುಂಬದವರು ಮನೆಗೆ ವಾಪಸ್ ಬರುವಂತೆ ಒತ್ತಡ ಹೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಯೋಗಿತಾಳ ಚಿನ್ನದ ಸರ ಮತ್ತು ಕಿವಿಯೋಲೆಗಳನ್ನು ದೋಚಲು ಸುಷ್ಮಾ ಸ್ಕೆಚ್ ಹಾಕಿದ್ದಳು. ಮೇ 12ರ ರಾತ್ರಿ ಯೋಗಿತಾಳ ರೂಮ್‌ಗೆ ಹೋಗಿ ಆಕೆಯ ಜೊತೆಯಲ್ಲೇ ಮಲಗಿದ್ದ ಸುಷ್ಮಾ, ಮೇ 13ರ ಮುಂಜಾನೆ 4:30ರ ಸುಮಾರಿಗೆ ಯೋಗಿತಾ ಗಾಢ ನಿದ್ರೆಯಲ್ಲಿದ್ದಾಗ ಕಾಂಕ್ರೀಟ್ ಹಾಲೋ ಬ್ಲಾಕ್ ಕಲ್ಲಿನಿಂದ ಆಕೆಯ ತಲೆಗೆ ಜಜ್ಜಿ ಆಭರಣ ದೋಚಿದ್ದಾಳೆ.

ಕೃತ್ಯ ಎಸಗಿದ ಬಳಿಕ ತನಗೇನೂ ತಿಳಿಯದಂತೆ ಬೆಳಿಗ್ಗೆ ಯೋಗಿತಾಳ ಸ್ನೇಹಿತೆಯರ ಜೊತೆ ಸೇರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುವ ದೊಡ್ಡ ನಾಟಕವಾಡಿದ್ದಾಳೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ಆಕೆಯಿಂದ ಕದ್ದ ಚಿನ್ನದ ಸರ ಮತ್ತು ಕಿವಿಯೋಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಎಸ್‌ಪಿ ಹರಿರಾಮ್ ಶಂಕರ್ ನಿರ್ದೇಶನದ ಮೇರೆಗೆ ಹೆಚ್ಚುವರಿ ಎಸ್‌ಪಿ ಸುಧಾಕರ್ ನಾಯಕ್ ಮತ್ತು ಡಿವೈಎಸ್‌ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು