ಪುತ್ತೂರು: ಪದವಿಪೂರ್ವ ಹಂತವು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಅವಧಿಯಲ್ಲಿ ನಿರಂತರ ಪರಿಶ್ರಮ, ಆತ್ಮವಿಶ್ವಾಸ, ಶಿಸ್ತು ಹಾಗೂ ಸಮಯಪಾಲನೆ ಅಳವಡಿಸಿಕೊಂಡರೆ ವಾರ್ಷಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಂಗಳೂರಿನ ಖ್ಯಾತ ಶಸ್ತ್ರಚಿಕಿತ್ಸಕ ಡಾ. ಕಿಶನ್ ಕುಮಾರ್ ಬಾಳಿಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಶ್ರೀಶಂಕರ ಸಭಾಭವನದಲ್ಲಿ ನಡೆದ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ವರ್ಷದ ಪಿಯು ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಪದವಿಪೂರ್ವ ಶಿಕ್ಷಣ ಜೀವನದ ಪ್ರಮುಖ ತಿರುವಾಗಿದ್ದು, ಈ ಹಂತದಲ್ಲಿ ಕೆಲವು ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ತ್ಯಾಗ ಮಾಡಬೇಕಾಗಬಹುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಅಂಕ ಗಳಿಸುವುದು ಸವಾಲಿನ ಕೆಲಸವಾದರೂ ಅಸಾಧ್ಯವಲ್ಲ. ಜೀವನದಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಂಡು, ಅದಕ್ಕೆ ಬೇಕಾದ ಪೂರಕ ತಯಾರಿಯನ್ನು ಕೈಗೊಳ್ಳಬೇಕು. ಸವಾಲುಗಳು ಮತ್ತು ಸೋಲುಗಳು ಎದುರಾದರೂ ಹಿಂಜರಿಯದೆ ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಅಧ್ಯಯನ ನಡೆಸಿ ಉತ್ತಮ ಅಂಕ ಗಳಿಸಿದಾಗ ಮೆರಿಟ್ ಸೀಟುಗಳ ಮೂಲಕ ಪೋಷಕರ ಮೇಲಿನ ಆರ್ಥಿಕ ಒತ್ತಡವನ್ನೂ ಕಡಿಮೆ ಮಾಡಬಹುದು ಎಂದರು.
ಪೂರ್ವ ತಯಾರಿ ಯಶಸ್ಸಿನ ಗುಟ್ಟು
ದೊಡ್ಡ ಗುರಿ ಸಾಧಿಸಲು ಪರಿಣಾಮಕಾರಿ ಅಧ್ಯಯನ ಕ್ರಮ ಅಗತ್ಯ. ಭಾನುವಾರ ಸೇರಿ ಪ್ರತಿದಿನದ ವೇಳಾಪಟ್ಟಿ (ಟೈಂ ಟೇಬಲ್) ರೂಪಿಸಿಕೊಂಡು ಪಾಠಗಳನ್ನು ಪುನರಾವರ್ತನೆ ಮಾಡಬೇಕು. ಪ್ರತಿದಿನ ಕಲಿತ ಪಾಠಗಳನ್ನು ಅಂದೇ ಓದಿಕೊಂಡು, ಮರುದಿನದ ತರಗತಿಗೆ ಪೂರ್ವ ಸಿದ್ಧತೆ ಮಾಡಿಕೊಂಡು ಬಂದರೆ ವಿಷಯ ಗ್ರಹಿಕೆ, ಕಲಿಕೆ ಮತ್ತು ಸ್ಮರಣಶಕ್ತಿ ಹೆಚ್ಚುತ್ತದೆ ಎಂದು ಡಾ. ಕಿಶನ್ ಕುಮಾರ್ ಸಲಹೆ ನೀಡಿದರು.
ಇದನ್ನೂ ಓದಿ: ಶೃಂಗೇರಿ ಜಗದ್ಗುರುಗಳ ಗುರುವಂದನೆ ಕಾರ್ಯಕ್ರಮ ಯಶಸ್ವಿ: ಅಂಬಿಕಾದಲ್ಲಿ ಕೃತಜ್ಞತಾ ಸಭೆ
ಮನೆಯ ವಾತಾವರಣವೂ ಓದಿಗೆ ಪೂರಕವಾಗಲಿ
ಪದವಿಪೂರ್ವದ ಎರಡು ವರ್ಷಗಳು ವಿದ್ಯಾರ್ಥಿಗಳ ಜೀವನದಲ್ಲಿ ಅಮೂಲ್ಯವಾಗಿದ್ದು, ಪ್ರತಿನಿಮಿಷವೂ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಓದಿಗೆ ಪೋಷಕರ ಸಹಕಾರ ಅತ್ಯಗತ್ಯ. ಮನೆಯಲ್ಲಿ ಓದುವಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು. ಟಿವಿ, ಮೊಬೈಲ್ ಸೇರಿದಂತೆ ವಿವಿಧ ಆಕರ್ಷಣೆಗಳಿಂದ ಮಕ್ಕಳು ದೂರ ಉಳಿಯಲು ಪೋಷಕರೂ ತ್ಯಾಗ ಮಾಡಬೇಕಾಗುತ್ತದೆ. ಇದರಿಂದ ಮಾತ್ರ ಮಕ್ಕಳು ಉತ್ತಮ ಸಾಧನೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯ, ಪದವಿಪೂರ್ವ ಹಂತದಲ್ಲಿ ಶಿಕ್ಷಣದ ಕಡೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ತಮ್ಮ ಜೀವನದ ಗುರಿ ಸಾಧಿಸಬಹುದು ಎಂದರು. ಅಂಬಿಕಾ ಸಂಸ್ಥೆ ಶಿಕ್ಷಣದ ಜೊತೆಗೆ ದೇಶಭಕ್ತಿ ಮತ್ತು ಧರ್ಮಜಾಗೃತಿ ಮೂಡಿಸುವ ಮೂಲಕ ಪ್ರಜ್ಞಾವಂತ ನಾಗರಿಕರನ್ನು ರೂಪಿಸುತ್ತಿದೆ ಎಂದು ಶ್ಲಾಘಿಸಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ದೇಶದ ಸಂಪನ್ಮೂಲಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಅಂಬಿಕಾ ಸಂಸ್ಥೆ ಯೋಗ ಶಿಕ್ಷಣ, ಧಾರ್ಮಿಕ ಮೌಲ್ಯಗಳು ಮತ್ತು ದೇಶಭಕ್ತಿಯ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದೆ ಎಂದರು.
ಶಿಸ್ತು, ಸಮಯಪಾಲನೆ ಮತ್ತು ಉತ್ತಮ ಶಿಕ್ಷಣ ಅಂಬಿಕಾ ಸಂಸ್ಥೆಯ ಪ್ರಮುಖ ಧ್ಯೇಯವಾಗಿದ್ದು, ಪ್ರತಿ ವರ್ಷ ಅತ್ಯುತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳನ್ನು ರೂಪಿಸಲಾಗುತ್ತಿದೆ. ಪೋಷಕರು ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಕ್ಕಳ ಪ್ರಗತಿ ಕುರಿತು ಮಾಹಿತಿ ಪಡೆಯಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಅಂಬಿಕಾ ಕಾಲೇಜು: ಸನಾತನ ವಿಚಾರಧಾರೆಗಳನ್ನು ಎಳೆಯರಿಗೆ ತಿಳಿಸಿಕೊಡುವುದು ಅಗತ್ಯ: ಬಾಲಕೃಷ್ಣ ಬೋರ್ಕರ್
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಖಜಾಂಚಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಕೆ. ಸುರೇಶ್ ಶೆಟ್ಟಿ, ಡಾ. ಎಚ್. ಮಾಧವ ಭಟ್ ಉಪಸ್ಥಿತರಿದ್ದರು.
ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿನಿ ಆವನಿ ನಾಯಕ್ ಪ್ರಾರ್ಥಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


