2 ಸಾವಿರ ಪಾವತಿಸಿ ಜೈಲಿಗೆ ಹೋಗುವ ಅವಕಾಶ, ಜೈಲೂಟ ಮಾಡಿ, ನಿಯಮ ಪಾಲನೆ ಕಡ್ಡಾಯ

chanchalguda-central-prison-feel-the-jail

ಹೈದರಾಬಾದ್‌: ತೆಲಂಗಾಣದ ಚಂಚಲ್‌ಗೂಡ ಕೇಂದ್ರ ಕಾರಾಗೃಹ ಸಾಮಾನ್ಯ ನಾಗರಿಕರಿಗೆ ಜೈಲಿನೊಳಗಿನ ಬದುಕಿನ ಕಠಿಣ ವಾಸ್ತವಿಕತೆ ಅನುಭವಿಸಲು ಅವಕಾಶ ಕಲ್ಪಿಸುವ ವಿಶಿಷ್ಟ ಯೋಜನೆ ಆರಂಭಿಸಿದೆ. ‘ಫೀಲ್ ದ ಜೈಲ್’ (Feel the Jail) ಹೆಸರಿನ ಈ ಕಾರ್ಯಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಯೋಜನೆಯಡಿ, ಆಸಕ್ತರು 12 ಗಂಟೆ ಅಥವಾ 24 ಗಂಟೆಗಳ ಕಾಲ ಜೈಲಿನ ಕೋಣೆಯಲ್ಲಿ ವಾಸಿಸುವ ಅವಕಾಶ ಪಡೆಯಬಹುದು. ಜೈಲಿನ ಕೈದಿಗಳಂತೆ ಸಾಮಾನ್ಯ ಊಟ ಸೇವಿಸಬೇಕು ಹಾಗೂ ಕಟ್ಟುನಿಟ್ಟಿನ ದೈನಂದಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

24 ಗಂಟೆಗಳ ಜೈಲು ಅನುಭವಕ್ಕೆ ₹2,000, 12 ಗಂಟೆಗಳ ಅನುಭವಕ್ಕೆ ₹1,000 ಶುಲ್ಕ ನಿಗದಿಪಡಿಸಲಾಗಿದೆ. ಈ ಯೋಜನೆಯನ್ನು ತೆಲಂಗಾಣ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರು ಚಂಚಲ್‌ಗೂಡದಲ್ಲಿರುವ ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ಕರಕ್ಷನಲ್ ಅಡ್ಮಿನಿಸ್ಟ್ರೇಷನ್ (SICA)ನಲ್ಲಿ ಹೊಸ ಜೈಲು ಮ್ಯೂಸಿಯಂ ಉದ್ಘಾಟನೆಯೊಂದಿಗೆ ಆರಂಭಿಸಿದರು.

ಕಾರಾಗೃಹಗಳನ್ನು “ಪರಿವರ್ತನೆ ಮತ್ತು ಪುನಶ್ಚೇತನದ ಕೇಂದ್ರಗಳು” ಎಂದು ಬಣ್ಣಿಸಿದ ರಾಜ್ಯಪಾಲರು, ಪ್ರಗತಿಪರ ಸಮಾಜವು ಶಿಕ್ಷೆಯ ಜೊತೆಗೆ ಪುನರ್ವಸತಿ ಮತ್ತು ಎರಡನೇ ಅವಕಾಶಗಳತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬೈಕ್ ಪಾರ್ಕ್ ಮಾಡಿ ಹೋಗಿದ್ದ ಸವಾರನಿಗೆ ಕಾಯುತ್ತಿತ್ತು ಬಿಗ್ ಸರ್ಪ್ರೈಸ್!; ಇಡೀ ಮೋಟಾರ್ ಸೈಕಲ್ ಅನ್ನೇ ಆವರಿಸಿದ ಸಾವಿರಾರು ಜೇನುನೊಣಗಳು!

ಹೊಸ ಜೈಲು ಮ್ಯೂಸಿಯಂನಲ್ಲಿ ನಿಜಾಂ ಕಾಲದಿಂದ ಇಂದಿನ ಸುಧಾರಿತ ಕಾರಾಗೃಹ ವ್ಯವಸ್ಥೆಯವರೆಗೆ ಜೈಲು ವ್ಯವಸ್ಥೆಯ ಬೆಳವಣಿಗೆ ಕುರಿತು ಮಾಹಿತಿ ನೀಡಲಾಗಿದೆ. ಹಳೆಯ ಸಂಕೋಲೆಗಳು, ಐತಿಹಾಸಿಕ ವಸ್ತುಗಳು ಹಾಗೂ ಭಕ್ತ ರಾಮದಾಸು ಮತ್ತು ದಾಶರಥಿ ಕೃಷ್ಣಮಾಚಾರ್ಯುಲು ಅವರಂತಹ ಪ್ರಮುಖ ಕೈದಿಗಳ ಕುರಿತ ಮಾಹಿತಿ ಪ್ರದರ್ಶಿಸಲಾಗಿದೆ.

ಜೈಲು ಕೈಗಾರಿಕೆಗಳು, ಕೈದಿಗಳ ಪುನರ್ವಸತಿ ಕಾರ್ಯಕ್ರಮಗಳು ಹಾಗೂ ನಾಗಾರ್ಜುನ ಸಾಗರ ಅಣೆಕಟ್ಟು ನಿರ್ಮಾಣದಲ್ಲಿ ಕೈದಿಗಳ ಕೊಡುಗೆ ಕುರಿತ ಮಾಹಿತಿಯನ್ನೂ ಮ್ಯೂಸಿಯಂ ಒಳಗೊಂಡಿದೆ.

ಸಂಗಾರೆಡ್ಡಿಯ ‘ಒನ್ ಡೇ ಜೈಲ್ ಎಕ್ಸ್‌ಪೀರಿಯನ್ಸ್’ ಮಾದರಿಯಿಂದ ಪ್ರೇರಿತವಾದ ಈ ಯೋಜನೆ ಇನ್ನಷ್ಟು ವ್ಯವಸ್ಥಿತ ಹಾಗೂ ಸಂವಾದಾತ್ಮಕವಾಗಿ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಯ ಮುಖ್ಯ ಉದ್ದೇಶ, ವಿಶೇಷವಾಗಿ ಯುವಜನರಲ್ಲಿ ಕಾನೂನು ಅರಿವು, ಶಿಸ್ತು ಹಾಗೂ ಸ್ವಾತಂತ್ರ್ಯದ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಶಿಷ್ಟ ಪರಿಕಲ್ಪನೆಯ ಈ ಯೋಜನೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಒಂದು ದಿನ ಕೈದಿಯಂತೆ ಬದುಕುವುದು ಹೇಗಿರಬಹುದು?” ಎಂಬ ಕುತೂಹಲ ಅನೇಕ ನೆಟ್ಟಿಗರಲ್ಲಿ ಮೂಡಿಸಿದೆ.‌

ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು