ಅಟ್ಟಹಾಸ ಮೆರೆಯುತ್ತಿರುವ ದಡಾರ, 512 ಮಂದಿ ಸಾವು

bangladesh-measles-outbreak-deaths-rise

ಬಾಂಗ್ಲಾದೇಶದಲ್ಲಿ ಮಿಸಲ್ಸ್‌ (ದಡಾರ) ಸೋಂಕು ವೇಗವಾಗಿ ಹರಡುತ್ತಿದ್ದು, ಕಳೆದ 24 ಗಂಟೆಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ ದೃಢೀಕೃತ ಹಾಗೂ ಶಂಕಿತ ಸಾವುಗಳ ಒಟ್ಟು ಸಂಖ್ಯೆ 512ಕ್ಕೆ ಏರಿಕೆಯಾಗಿದೆ.

ಬಾಂಗ್ಲಾದೇಶದ ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವಿಸಸ್ (DGHS) ನೀಡಿದ ಮಾಹಿತಿಯ ಪ್ರಕಾರ, ಇತ್ತೀಚಿನ 13 ಸಾವುಗಳಲ್ಲಿ ಒಂದು ಸಾವು ಮಾತ್ರ ಮಿಸಲ್ಸ್‌ನಿಂದ ದೃಢೀಕೃತವಾಗಿದ್ದು, ಉಳಿದ 12 ಮಂದಿ ದಡಾರ ಲಕ್ಷಣಗಳನ್ನು ತೋರಿಸಿದ್ದರಿಂದ ಶಂಕಿತ ಸಾವುಗಳೆಂದು ಪರಿಗಣಿಸಲಾಗಿದೆ.

‘ದಿ ಡೈಲಿ ಸ್ಟಾರ್’ ವರದಿ ಪ್ರಕಾರ, ದೇಶದಲ್ಲಿ ಈಗಾಗಲೇ 86 ದೃಢೀಕೃತ ಸಾವುಗಳು ಮತ್ತು 426 ಶಂಕಿತ ಸಾವುಗಳು ದಾಖಲಾಗಿವೆ. ಇದೇ ವೇಳೆ, ಕಳೆದ ಒಂದು ದಿನದಲ್ಲಿ 165 ಹೊಸ ದೃಢೀಕೃತ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,494ಕ್ಕೆ ಏರಿಕೆಯಾಗಿದೆ. ಜೊತೆಗೆ 1,967 ಹೊಸ ಶಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಶಂಕಿತ ಪ್ರಕರಣಗಳ ಸಂಖ್ಯೆ 62,507ಕ್ಕೆ ತಲುಪಿದೆ.

ಲಸಿಕೆ ಕೊರತೆಯ ಬಗ್ಗೆ ಯುನಿಸೆಫ್‌ ಎಚ್ಚರಿಕೆ

ಪರಿಸ್ಥಿತಿ ಹದಗೆಡುತ್ತಿರುವ ನಡುವೆಯೇ ಯುನಿಸೆಫ್‌ (UNICEF) ಬಾಂಗ್ಲಾದೇಶದ ಹಿಂದಿನ ಮಧ್ಯಂತರ ಸರ್ಕಾರಕ್ಕೆ ಲಸಿಕೆ ಕೊರತೆಯಿಂದ ದೊಡ್ಡ ಮಟ್ಟದ ಸಾಂಕ್ರಾಮಿಕ ಉಂಟಾಗುವ ಅಪಾಯವಿದೆ ಎಂದು ಹಲವು ಬಾರಿ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದೆ.

ಇದನ್ನೂ ಓದಿ: ಮೊಬೈಲ್ ನೋಟಿಫಿಕೇಶನ್‌ಗಳು ನಿಮ್ಮನ್ನು ರೋಗಿಯನ್ನಾಗಿ ಮಾಡಬಹುದು!

ಢಾಕಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಂಗ್ಲಾದೇಶದ ಯುನಿಸೆಫ್ ಪ್ರತಿನಿಧಿ ರಾಣಾ ಫ್ಲಾವರ್ಸ್, 2024ರಿಂದ 2026ರ ಅವಧಿಯಲ್ಲಿ ಆರೋಗ್ಯ ಸಚಿವಾಲಯಕ್ಕೆ ಹಲವು ಪತ್ರಗಳನ್ನು ಕಳುಹಿಸಿ, ಅನೇಕ ಸಭೆಗಳಲ್ಲಿ ಲಸಿಕೆ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು ಎಂದು ಹೇಳಿದ್ದಾರೆ.

“ಲಸಿಕೆ ಖರೀದಿಯಲ್ಲಿ ವಿಳಂಬವಾದರೆ ಗಂಭೀರ ಸಾರ್ವಜನಿಕ ಆರೋಗ್ಯ ಸಂಕಷ್ಟ ಎದುರಾಗಬಹುದು ಎಂದು 2024ರಲ್ಲೇ ಎಚ್ಚರಿಕೆ ನೀಡಲಾಗಿತ್ತು. ಆದರೆ, ಸಮಯೋಚಿತ ಕ್ರಮ ಕೈಗೊಳ್ಳಲಾಗಲಿಲ್ಲ,” ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಸರ್ಕಾರ ಈ ಸಾಂಕ್ರಾಮಿಕದ ನಿರ್ವಹಣೆ ಕುರಿತು ತನಿಖೆ ಆರಂಭಿಸಿದ್ದು, ಅಗತ್ಯ ದಾಖಲೆಗಳನ್ನು ಒದಗಿಸಲು ಯುನಿಸೆಫ್ ಸಹಕರಿಸುವುದಾಗಿ ತಿಳಿಸಿದೆ.

ಆರೋಗ್ಯ ಅಧಿಕಾರಿಗಳು ವಿಶೇಷವಾಗಿ ಮಕ್ಕಳಲ್ಲಿ ಸೋಂಕು ವೇಗವಾಗಿ ಹರಡುವ ಆತಂಕ ವ್ಯಕ್ತಪಡಿಸಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು