ಮೈಸೂರು: ಬಾಲಿವುಡ್‌ನ ಸ್ಟಾರ್ ನಟ ರಣ್ವೀರ್ ಸಿಂಗ್ ಅವರ ಜೀವನದಲ್ಲಿ ಈಗ ಭಾರಿ ಬಿರುಗಾಳಿ ಎದ್ದಿದೆ. ಒಂದೆಡೆ ಹಿಂದಿ ಚಿತ್ರರಂಗದಿಂದಲೇ ಬಹಿಷ್ಕಾರದ (Ban) ಭೀತಿ ಎದುರಿಸುತ್ತಿರುವ ನಟ, ಇದೀಗ ಸದ್ದಿಲ್ಲದೆ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಓಡಿ ಬಂದಿದ್ದಾರೆ. ಕೆಲ ತಿಂಗಳ ಹಿಂದೆ ದೈವಕ್ಕೆ ಅಪಮಾನ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಬೆನ್ನಲ್ಲೇ, ರಣ್ವೀರ್ ಸಿಂಗ್ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ಕ್ಷಮೆಯಾಚಿಸಲು ಬಂದಿರುವುದು ಭಾರಿ ಸಂಚಲನ ಮೂಡಿಸಿದೆ.
ನಟ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಹಿಟ್ ಆಗಿದ್ದವು. ಆದರೆ, ಈ ಎರಡೂ ಸಿನಿಮಾಗಳ ಬಹುತೇಕ ಯಶಸ್ಸಿನ ಕ್ರೆಡಿಟ್ ನಿರ್ದೇಶಕ ಆದಿತ್ಯ ಧರ್ ಪಾಲಾಗಿತ್ತು. ‘ಧುರಂಧರ್’ ಸರಣಿಯ ನಂತರ ರಣ್ವೀರ್ ಸಿಂಗ್ ಅವರು ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ಅವರ ಅಭಿಮಾನಿಗಳು ನಿರೀಕ್ಷಿಸುತ್ತಿರುವಾಗಲೇ, ಚಿತ್ರರಂಗದ ಆಂತರಿಕ ವಿವಾದಗಳು ಹಾಗೂ ಇತ್ತೀಚಿನ ‘ಡಾನ್ 3’ ವಿವಾದದ ಹಿನ್ನೆಲೆಯಲ್ಲಿ ಅವರನ್ನು ಬಾಲಿವುಡ್‌ನಿಂದಲೇ ಬ್ಯಾನ್ ಮಾಡುವ ನಿರ್ಧಾರ ಹೊರಬಿದ್ದಿದೆ ಎನ್ನಲಾಗಿದೆ.
ಚಿತ್ರರಂಗದ ನಿಷೇಧದ ನಡುವೆಯೇ ರಣ್ವೀರ್ ಸಿಂಗ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿತ್ತು. ಕೆಲವು ತಿಂಗಳ ಹಿಂದೆ ದೈವದ ಆಚರಣೆ ಮತ್ತು ನಂಬಿಕೆಗೆ ಅಪಮಾನ ಎಸಗಿದ ಆರೋಪ ಇವರ ಮೇಲಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಟ ರಣ್ವೀರ್ ಸಿಂಗ್ ಅವರಿಗೆ ತಾವು ಮಾಡಿದ ತಪ್ಪಿಗೆ ತಕ್ಷಣವೇ ದೈವದ ಸನ್ನಿಧಿಯಲ್ಲಿ ಕ್ಷಮೆ ಕೇಳುವಂತೆ ಖಡಕ್ ಸೂಚನೆ ನೀಡಿತ್ತು.
ಇದನ್ನೂ ಓದಿ: ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರು ಹಾಕಿದ ನಟ ರವಿ ಮೋಹನ್ ವಿಚ್ಛೇದನ ಸಿಗುವವರೆಗೂ ಸಿನಿಮಾ ಮಾಡಲ್ಲ, ನನ್ನ ಜೀವಕ್ಕೆ ಅವರೇ ಹೊಣೆ
ಸಿನಿಮಾ ಕೆರಿಯರ್‌ನಲ್ಲಿ ಬ್ಯಾನ್ ಭೀತಿ ಹಾಗೂ ಕೋರ್ಟ್‌ನಿಂದ ಕಾನೂನು ಚಾಟಿಯ ಏಟು ತಿಂದು ಕಂಗೆಟ್ಟಿರುವ ರಣ್ವೀರ್ ಸಿಂಗ್, ತಮ್ಮ ಜೀವನದ ಈ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ತಾಯಿ ಚಾಮುಂಡೇಶ್ವರಿಯ ಮೊರೆ ಹೋಗಿದ್ದಾರೆ. ಹೈಕೋರ್ಟ್ ಆದೇಶದಂತೆ ತಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು, ಚಾಮುಂಡಿ ತಾಯಿಯ ಪಾದಕ್ಕೆ ಬಿದ್ದು ಕ್ಷಮೆ ಯಾಚಿಸಲು ಅವರು ಮೈಸೂರಿಗೆ ಆಗಮಿಸಿದ್ದಾರೆ. ಸದ್ಯ ರಣ್ವೀರ್ ಸಿಂಗ್ ಅವರ ಮೈಸೂರು ಭೇಟಿಯ ನಡೆ ಇಡೀ ಚಿತ್ರರಂಗ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


