ಬೆಂಗಳೂರು: ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ನಟಿ ಬಿಂದಿಯಾ ಕಾಂಬಿನೇಷನ್ನ ಈ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ ಮೂರು ದಶಕಗಳೇ ಕಳೆದಿವೆ. ಆದರೆ, ಅಂದು ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ಭೀಕರ ವಿವಾದ ಮಾತ್ರ ಇಬ್ಬರು ತಾರೆಯರ ನಡುವೆ ದೊಡ್ಡ ಕಂದಕ ಸೃಷ್ಟಿಸಿತ್ತು. ಇದೀಗ ಹಲವು ವರ್ಷಗಳ ನಂತರ ಆ ಕಹಿ ಘಟನೆಯನ್ನು ನೆನೆದು ನಟಿ ಬಿಂದಿಯಾ ತೀವ್ರ ಭಾವುಕರಾಗಿದ್ದಾರೆ. ಅಲ್ಲದೆ, ರವಿಚಂದ್ರನ್ ಅವರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಇತ್ತೀಚೆಗೆ ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ನಟಿ ಬಿಂದಿಯಾ, ಅಂದು ಕೇವಲ ಭಾಷೆಯ ಸಮಸ್ಯೆ ಮತ್ತು ತಪ್ಪು ತಿಳುವಳಿಕೆಯಿಂದಾಗಿ ಇಡೀ ಚಿತ್ರರಂಗವೇ ಬೆಚ್ಚಿಬೀಳುವಂತಹ ಘಟನೆ ನಡೆದುಹೋಯಿತು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಂದು ‘ಜಾನ್ ತೇರೆ ನಾಮ್’ ಹೆಸರಿನ ಸೂಪರ್ ಹಿಟ್ ಹಿಂದಿ ಸಿನಿಮಾದ ಯಶಸ್ಸಿನ ಅಲೆಯಲ್ಲಿದ್ದ ಬಿಂದಿಯಾ ಅವರನ್ನು, ಹಳ್ಳಿ ಮೇಷ್ಟ್ರು ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿದ್ದ ರವಿಚಂದ್ರನ್ ತಂಡ ಮುಂಬೈಗೆ ತೆರಳಿ ಭೇಟಿ ಮಾಡಿತ್ತು. ಭಾಷೆಯ ಸಮಸ್ಯೆ ಇದ್ದರೂ ರವಿಚಂದ್ರನ್ ಅವರ ಮೇಲಿನ ಗೌರವದಿಂದ ಬಿಂದಿಯಾ ನಟಿಸಲು ಒಪ್ಪಿದ್ದರು. ಸಿನಿಮಾ ತೆರೆಕಂಡು ಈ ಜೋಡಿಯನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿಕೊಂಡಿದ್ದರು.
ಇದನ್ನೂ ಓದಿ: ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರು ಹಾಕಿದ ನಟ ರವಿ ಮೋಹನ್: ವಿಚ್ಛೇದನ ಸಿಗುವವರೆಗೂ ಸಿನಿಮಾ ಮಾಡಲ್ಲ, ನನ್ನ ಜೀವಕ್ಕೆ ಅವರೇ ಹೊಣೆ!
ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗಲೇ ಅಂದು ಪ್ರಸಿದ್ಧ ಮ್ಯಾಗಜಿನ್ ಒಂದರಲ್ಲಿ ಬಂದ ವರದಿ ಇಡೀ ಸ್ಯಾಂಡಲ್ವುಡ್ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆ ಮ್ಯಾಗಜಿನ್ನಲ್ಲಿ, “ನಟಿ ಬಿಂದಿಯಾ ಅವರ ಮೇಲೆ ರವಿಚಂದ್ರನ್ ಅತ್ಯಾಚಾರದ ಯತ್ನ ನಡೆಸಿದ್ದಾರೆ” ಎಂಬ ಗಂಭೀರ ಆರೋಪವನ್ನು ನಟಿಯ ಹೆಸರಿನಲ್ಲೇ ಪ್ರಕಟಿಸಲಾಗಿತ್ತು. ಭಾಷೆ ಸರಿಯಾಗಿ ತಿಳಿಯದ ಕಾರಣ ಮತ್ತು ಮ್ಯಾಗಜಿನ್ನವರು ತಮಗೆ ಬೇಕಾದಂತೆ ಬರೆದುಕೊಂಡಿದ್ದರಿಂದ ತಮಗೆ ತಿಳಿಯದೆಯೇ ರವಿಚಂದ್ರನ್ ಅವರ ಇಮೇಜ್ಗೆ ಧಕ್ಕೆ ತಂದಂತಾಯಿತು ಎಂದು ಬಿಂದಿಯಾ ಈಗ ಕಣ್ಣೀರಿಟ್ಟಿದ್ದಾರೆ. ರವಿಚಂದ್ರನ್ ಒಬ್ಬ ಅದ್ಭುತ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿ, ಅಂದು ನಡೆದ ಘಟನೆಗೆ ನಾನು ಅವರಲ್ಲಿ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ ಎಂದು ಬಿಂದಿಯಾ ಭಾವುಕರಾಗಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


