ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ – ಬಂಟ್ವಾಳ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ

ಬಂಟ್ವಾಳ: ಜೂನ್ 1 ರಂದು ರಾಜ್ಯಾದ್ಯಂತ ಹೊಸ ಶೈಕ್ಷಣಿಕ ವರ್ಷದ ಬಾಗಿಲು ತೆರೆದಿದ್ದು, ಬಣ್ಣದ ಕನಸುಗಳನ್ನು ಹೊತ್ತ ಪುಟಾಣಿ ಮಕ್ಕಳ ಕಣ್ಣುಗಳಲ್ಲಿ ಆನಂದದ ಹೊನಲು ಎದ್ದು ಕಾಣುತ್ತಿತ್ತು. “ಉತ್ತಮ ಕಲಿಕೆ, ಉಜ್ವಲ ಭವಿಷ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಬಂಟ್ವಾಳ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಮಕ್ಕಳ ಸಡಗರ ಮತ್ತು ಕಲರವಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಮಾಲತಿ ಅವರು, “ಇಂದಿನ ಕಾಲಘಟ್ಟದಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ. ಆದರೆ ಅಂತಹ ಆತಂಕದ ನಡುವೆಯೂ ಮಂಚಿ ಕೊಳ್ನಾಡು ಪ್ರೌಢಶಾಲೆಯ ಮಕ್ಕಳ ದಾಖಲಾತಿ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿರುವುದು ಹೆಮ್ಮೆಯ ವಿಚಾರ. ಶೇಕಡಾ 100 ರಷ್ಟು ಫಲಿತಾಂಶದೊಂದಿಗೆ ಶಾಲೆಯ ಶೈಕ್ಷಣಿಕ ಗುಣಮಟ್ಟವು ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಇಲ್ಲಿ ಬಿತ್ತಿದ ಅಕ್ಷರ ಬೀಜಗಳು ಮುಂದೆ ನಾಡಿಗೆ ಬೆಳಕಾಗಲಿವೆ” ಎಂದು ಶ್ಲಾಘಿಸಿದರು.

ಶಿಕ್ಷಣ ಸಂಯೋಜಕರಾದ ರಮಾನಂದ ನೂಜಿಪ್ಪಾಡಿ ಮಾತನಾಡಿ, ಶಾಲಾಭಿವೃದ್ಧಿ ಸಮಿತಿ (SDMC) ಹಾಗೂ ಶಿಕ್ಷಕ ವೃಂದದ ಜಂಟಿ ಶ್ರಮ ಶಾಲೆಯ ಬೆಳವಣಿಗೆಗೆ ಪ್ರಮುಖ ಕಾರಣ ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್ ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಭೌತಿಕ ಹಾಗೂ ಶೈಕ್ಷಣಿಕ ವ್ಯವಸ್ಥೆಗಳನ್ನು ಈಡೇರಿಸಲು ಸಮಿತಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ತಿಳಿಸಿದರು.

ಶಾಲಾರಂಭದ ಮೊದಲ ದಿನವೇ ದಾಖಲಾತಿ ಪಡೆದ ವಿದ್ಯಾರ್ಥಿಗಳನ್ನು ಪೆನ್ನು ನೀಡಿ ಸ್ವಾಗತಿಸಲಾಯಿತು. ಇದರೊಂದಿಗೆ ಸರ್ಕಾರದಿಂದ ನೀಡಲಾದ ಉಚಿತ ಪಠ್ಯಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಹೊಸ ವಿನ್ಯಾಸದ ಆಕರ್ಷಕ ಕ್ರೀಡಾ ಜರ್ಸಿಯನ್ನು ಪ್ರದರ್ಶಿಸಲಾಯಿತು ಹಾಗೂ ಶಾಲಾ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

 ವೇದಿಕೆಯಲ್ಲಿ ಎಸ್‌ಡಿಎಂಸಿ ಸದಸ್ಯರಾದ ರಮೇಶ್ ರಾವ್ ಪತ್ತುಮುಡಿ, ಡಾ. ಗೋಪಾಲ್ ಆಚಾರ್, ಹಿರಿಯ ವಿದ್ಯಾರ್ಥಿ ಸುಲೈಮಾನ್ ಜಿ ಸುರಿಬೈಲು, ಗಣೇಶ್ ಪ್ರಭು, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿ ವಿದ್ಯಾಶ್ರೀ, ಶಿಕ್ಷಣ ಸಂಯೋಜಕಿ ಸುಧಾ, ರಮೇಶ್ ಟೈಲರ್ ಹಾಗೂ ಸ್ಥಳ ದಾನಿಗಳಾದ ನಾರಾಯಣ ಭಟ್ ನೂಜಿಬೈಲು ಉಪಸ್ಥಿತರಿದ್ದರು.

ಇದನ್ನೂ ಓದಿ: ಜಿಲ್ಲಾ ಅತ್ಯುತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿಗೆ ಮಂಚಿ-ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ಆಯ್ಕೆ

ಕನ್ನಡ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು, ಮುಖ್ಯ ಶಿಕ್ಷಕಿ ಸುಶೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ಶಿಕ್ಷಕಿ ಶಾಂತ ಎಸ್ ವಂದಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು