ಬೆಂಗಳೂರು: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರ ವಹಿಸಿಕೊಳ್ಳಲಿರುವ ಹಿನ್ನೆಲೆಯಲ್ಲಿ, ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಉಪಮುಖ್ಯಮಂತ್ರಿ (DCM) ಸ್ಥಾನದ ಸಸ್ಪೆನ್ಸ್‌ಗೆ ಕೊನೆಗೂ ತೆರೆಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್‌ನ ಅಂತಿಮ ಮತ್ತು ಹೈವೋಲ್ಟೇಜ್ ನಿರ್ಧಾರದ ಪ್ರಕಾರ, ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ (Dr. G Parameshwara) ಅವರನ್ನು ರಾಜ್ಯದ ಏಕೈಕ ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದ್ದು, ಅವರು ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅತ್ಯಂತ ನಂಬಿಕಸ್ಥ ಮೂಲಗಳು ಖಚಿತಪಡಿಸಿವೆ.
ಮುಖ್ಯಮಂತ್ರಿ ಆಯ್ಕೆಯ ಬೆನ್ನಲ್ಲೇ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಉಪಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸುವ ಬಗ್ಗೆ ತೀವ್ರ ಕಸರತ್ತು ನಡೆದಿತ್ತು. ಸಮಾಜದ ವಿವಿಧ ಸಮುದಾಯಗಳನ್ನು ಸಮತೋಲನಗೊಳಿಸಲು ಒಬ್ಬರು, ಇಬ್ಬರು, ಮೂವರು ಅಥವಾ ನಾಲ್ಕು ಉಪಮುಖ್ಯಮಂತ್ರಿಗಳಿರಬಹುದು ಎಂಬ ಭಾರಿ ಊಹಾಪೋಹಗಳು ರಾಜಕೀಯ ಕಾರಿಡಾರ್‌ನಲ್ಲಿ ಹರಿದಾಡುತ್ತಿದ್ದವು. ಇನ್ನೊಂದೆಡೆ, ನೆರೆಯ ಕೇರಳ ಮಾದರಿಯನ್ನು ಅನುಸರಿಸಿ ಯಾವುದೇ ಉಪಮುಖ್ಯಮಂತ್ರಿ ಸ್ಥಾನವನ್ನೇ ಸೃಷ್ಟಿಸುವುದು ಬೇಡ ಎಂಬ ಆಲೋಚನೆಯೂ ಹೈಕಮಾಂಡ್ ಮಟ್ಟದಲ್ಲಿ ನಡೆದಿತ್ತು.
ಇದನ್ನೂ ಓದಿ: ಜೂನ್ 3ಕ್ಕೆ ಡಿಕೆ ಶಿವಕುಮಾರ್ ಪ್ರಮಾಣ ವಚನ: ತೈಲ ಬೆಲೆ ಏರಿಕೆ ಹಿನ್ನೆಲೆ ಸರಳವಾಗಿ ಪ್ರಮಾಣ ವಚನ ಸ್ವೀಕಾರ
ದೆಹಲಿ ಮತ್ತು ಬೆಂಗಳೂರಿನಲ್ಲಿ ತಡರಾತ್ರಿವರೆಗೂ ನಡೆದ ಸುದೀರ್ಘ ಮ್ಯಾರಥಾನ್ ಚರ್ಚೆಗಳು ಹಾಗೂ ಇಂದು ಬೆಳಗ್ಗೆ ನಡೆದ ಅಂತಿಮ ಪರಾಮರ್ಶೆಗಳ ನಂತರ ಕಾಂಗ್ರೆಸ್ ಹೈಕಮಾಂಡ್ ಏಕೈಕ ಡಿಸಿಎಂ ಸೂತ್ರಕ್ಕೆ ಒಪ್ಪಿಗೆ ಸೂಚಿಸಿದೆ. ಪಕ್ಷದ ಶಿಸ್ತಿನ ಹಾಗೂ ಅನುಭವಿ ನಾಯಕರಾಗಿರುವ ಡಾ. ಜಿ. ಪರಮೇಶ್ವರ್ ಅವರಿಗೆ ಮಾತ್ರ ಈ ಜವಾಬ್ದಾರಿ ನೀಡಲು ತೀರ್ಮಾನಿಸುವ ಮೂಲಕ ಪಕ್ಷದಲ್ಲಾಗಬಹುದಾಗಿದ್ದ ದೊಡ್ಡ ಮಟ್ಟದ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲಾಗಿದೆ. ಈ ನಿರ್ಧಾರದಿಂದಾಗಿ ಸದ್ಯಕ್ಕೆ ಕೈ ಪಾಳಯದ ಒಳಗಿನ ಬಿಕ್ಕಟ್ಟು ಸಂಪೂರ್ಣವಾಗಿ ತಿಳಿಗೊಂಡಂತಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


