ದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಭೀಕರ ಅಗ್ನಿ ದುರಂತವೊಂದು ಸಂಭವಿಸಿದೆ. ದೆಹಲಿಯ ಪ್ರತಿಷ್ಠಿತ ಮಾಳವೀಯ ನಗರ (Malviya Nagar) ಪ್ರದೇಶದಲ್ಲಿರುವ ‘ಹೋಟೆಲ್ ಫ್ಲೋರಿಶ್ ಸ್ಟೇಸ್’ (Hotel Flourish Stays) ನಲ್ಲಿ ತಡರಾತ್ರಿ ಶಾರ್ಟ್ ಸರ್ಕ್ಯೂಟ್ ಕಾರಣದಿಂದಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಭೀಕರ ಅಪಘಾತದಲ್ಲಿ ಬರೋಬ್ಬರಿ 21 ಜನರು ಜೀವಂತವಾಗಿ ದಹನವಾಗಿದ್ದು, ಇಡೀ ದೇಶವನ್ನೇ ನಡುಗಿಸಿದೆ.
ಸದ್ಯ ಹೋಟೆಲ್ ಒಳಗಿನ ಭೀಕರ ದೃಶ್ಯಗಳು (Visuals)ಲಭ್ಯವಾಗಿದ್ದು, ಅವುಗಳನ್ನು ನೋಡಿದರೆ ಎದೆ ಜಲ್ಲೆನ್ನುತ್ತದೆ. ಬೆಂಕಿಯ ಕೆನ್ನಾಲಿಗೆಗೆ ಹೋಟೆಲ್‌ನ ಕೋಣೆಗಳು, ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ. ಗೋಡೆಗಳೆಲ್ಲಾ ಕಪ್ಪಿಟ್ಟಿದ್ದು, ಎಲ್ಲೆಂದರಲ್ಲಿ ಗಾಜು ಮತ್ತು ಕಬ್ಬಿಣದ ಅವಶೇಷಗಳು ಬಿದ್ದಿವೆ. ದಟ್ಟವಾದ ಹೊಗೆಯ ಕಾರಣದಿಂದಾಗಿ ಹೋಟೆಲ್ ಕೋಣೆಗಳಲ್ಲಿದ್ದ ಗ್ರಾಹಕರು ಹೊರಬರಲಾರದೆ ಉಸಿರುಗಟ್ಟಿ ಹಾಗೂ ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
#WATCH | Delhi: Visuals from inside the Hotel Flourish Stays, in the Malviya Nagar area, where a massive fire broke out, claiming the lives of 21 people. pic.twitter.com/O00Rq6LkGC
— ANI (@ANI) June 4, 2026
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ 15ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು (Fire Tenders) ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಗಂಭೀರವಾಗಿ ಗಾಯಗೊಂಡಿರುವ ಹಲವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ. ಹೋಟೆಲ್‌ನಲ್ಲಿ ಸೂಕ್ತ ಅಗ್ನಿಶಾಮಕ ಸುರಕ್ಷತಾ ಕ್ರಮಗಳು (Fire Safety Norms) ಇರಲಿಲ್ಲ ಎಂಬ ಆರೋಪ ಕೇಳಿಬಂದಿದ್ದು, ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


