ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ (TTD) ಒಂದೆಡೆ ಭಕ್ತರ ಆರಾಧ್ಯ ಪ್ರಸಾದವಾದ ಲಡ್ಡು ಮಾರಾಟದಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಲಡ್ಡು ತಯಾರಿಕೆಗೆ ನಕಲಿ ತುಪ್ಪ ಸರಬರಾಜು ಮಾಡಿದ ವಂಚಕರ ವಿರುದ್ಧ ಜಾರಿ ನಿರ್ದೇಶನಾಲಯ (ED) ದೇಶಾದ್ಯಂತ ಭಾರಿ ಬೇಟೆಯಾಡಿದೆ.
ಕಳೆದ ಮೇ ತಿಂಗಳೊಂದರಲ್ಲೇ ಬರೋಬ್ಬರಿ 1.2 ಕೋಟಿಗೂ ಅಧಿಕ ತಿರುಪತಿ ಲಡ್ಡುಗಳು ಮಾರಾಟವಾಗುವ ಮೂಲಕ ಸಾರ್ವಕಾಲಿಕ ಮಾಸಿಕ ಮಾರಾಟದ ಹೊಸ ದಾಖಲೆ (Highest Monthly Sale Record) ಸೃಷ್ಟಿಯಾಗಿದೆ. ಇದು ಕಳೆದ ವರ್ಷಗಳ ದಾಖಲೆಯನ್ನು ಧೂಳೀಪಟ ಮಾಡಿದೆ. 2024ರ ಮೇ ತಿಂಗಳಲ್ಲಿ 1.01 ಕೋಟಿ ಹಾಗೂ 2025ರ ಮೇ ತಿಂಗಳಲ್ಲಿ 1.1 ಕೋಟಿ ಲಡ್ಡುಗಳು ಮಾರಾಟವಾಗಿದ್ದವು. ಈ ಬಾರಿ ಭಕ್ತರ ಸಂಖ್ಯೆ ಅಪಾರವಾಗಿ ಹೆಚ್ಚಿದ್ದರಿಂದ ಲಡ್ಡು ಪ್ರಸಾದದ ಬೇಡಿಕೆಯೂ ಗಗನಕ್ಕೇರಿದೆ.
ಇದನ್ನೂ ಓದಿ: ಲಡಾಖ್ನಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಭೀಕರ ಪತನ!: ಇಬ್ಬರು ಮೇಜರ್, ಒಬ್ಬರು ಲೆಫ್ಟಿನೆಂಟ್ ಕರ್ನಲ್ ಪವಾಡಸದೃಶ ಪಾರು
ನಕಲಿ ತುಪ್ಪ ಹಗರಣ: ದೇಶದ 15 ಕಡೆ ಇ.ಡಿ. ರೇಡ್, 60 ಲಕ್ಷ ನಗದು ಜಪ್ತಿ:
ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬುಧವಾರ ದೇಶದಾದ್ಯಂತ ಮಿಂಚಿನ ಕಾರ್ಯಾಚರಣೆ ನಡೆಸಿದೆ. ದೆಹಲಿ, ಡೆಹ್ರಾಡೂನ್, ಮುಂಬೈ, ತಮಿಳುನಾಡಿನ ದಿಂಡಿಗಲ್ ಮತ್ತು ಆಂಧ್ರಪ್ರದೇಶದ ಗುಂಟೂರು ಸೇರಿದಂತೆ ಒಟ್ಟು 15 ಪ್ರಮುಖ ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳು ಏಕಕಾಲಕ್ಕೆ ಶೋಧ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ 60 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಲಡ್ಡುಗೆ ತುಪ್ಪ ಸರಬರಾಜು ಮಾಡುತ್ತಿದ್ದ ತಮಿಳುನಾಡಿನ ದಿಂಡಿಗಲ್ನಲ್ಲಿರುವ ‘ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್’, ಅಹಲ್ಯಾನಗರದ ‘ಮಾಲ್ಗಂಗಾ ಮಿಲ್ಕ್ ಆ್ಯಂಡ್ ಆಗ್ರೋ ಪ್ರಾಡಕ್ಟ್ಸ್’ ಮತ್ತು ರೂರ್ಕಿಯ ‘ಭೋಲೆ ಬಾಬಾ ಆರ್ಗಾನಿಕ್ ಡೈರಿ ಮಿಲ್ಕ್’ ಕಂಪನಿಗಳ ನಿರ್ದೇಶಕರ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ತೀವ್ರಗೊಂಡಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


