ತಂದೆ ವೀರೇಂದ್ರ ಸೆಹ್ವಾಗ್ ಹಾದಿಯಲ್ಲೇ ಪುತ್ರ ಆರ್ಯವೀರ್ ಸೆಹ್ವಾಗ್ ಅಬ್ಬರ: ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕ್ ವಿರುದ್ಧ ಅರ್ಧಶತಕ

ಅಲ್ ಅಮೆರಾತ್: ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್  ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ , ತಮ್ಮ ತಂದೆಯಂತೆಯೇ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭರವಸೆ ಮೂಡಿಸಿದ್ದಾರೆ. 2026ರ ಅಂಡರ್-19 ಏಷ್ಯಾಕಪ್ (U19 Asia Cup 2026) ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅರ್ಧಶತಕ ಸಿಡಿಸಿ ಮಿಂಚಿದ ಆರ್ಯವೀರ್, ಇಡೀ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

ಪಾಕ್ ಬೌಲರ್‌ಗಳ ಸವಾಲಿಗೆ ಎದೆಯೊಡ್ಡಿ ನಿಂತ ಆರ್ಯವೀರ್: 51 ಎಸೆತಗಳಲ್ಲಿ ಅರ್ಧಶತಕ!

ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಪಾಕ್ ವೇಗಿಗಳು ಸವಾಲೊಡ್ಡಿದ್ದರು. ಬಲ ಮೊಣಕೈಗೆ ಚೆಂಡು ಬಡಿದು ನೋವು ಅನುಭವಿಸಿದರೂ ಧೃತಿಗೆಡದೆ ಕ್ರೀಸ್‌ನಲ್ಲಿ ನೆಲೆಯೂರಿದ ಆರ್ಯವೀರ್, ಆಕರ್ಷಕ ಡ್ರೈವ್, ಕಟ್ ಹಾಗೂ ಪುಲ್ ಶಾಟ್‌ಗಳ ಮೂಲಕ ಬೌಂಡರಿಗಳನ್ನು ಬಾರಿಸಿದರು.  ಕೇವಲ 51 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಆರ್ಯವೀರ್, ಮತ್ತೊಂದು ತುದಿಯಲ್ಲಿದ್ದ ಲಕ್ಷ್ಯ ರಾಯಚಂದಾನಿ ಅವರೊಂದಿಗೆ ಸೇರಿ ಭಾರತದ ಚೇಸಿಂಗ್‌ಗೆ ಭರವಸೆ ಮೂಡಿಸಿದರು. ಆದರೆ 18ನೇ ಓವರ್‌ನಲ್ಲಿ ಸ್ಪಿನ್ನರ್ ನಿಕಾಬ್ ಶಫೀಕ್ (Niqab Shafiq) ಎಸೆತದಲ್ಲಿ ಲಾಂಗ್-ಆನ್ ಮೇಲೆ ದೊಡ್ಡ ಹೊಡೆತಕ್ಕೆ ಮುಂದಾಗಿ 58 ರನ್ ಗಳಿಸಿದ್ದಾಗ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಭಾರತ 1 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿತ್ತು.

Advertisement

361 ರನ್‌ಗಳೊಂದಿಗೆ ಅಂಡರ್-19 ಏಷ್ಯಾಕಪ್‌ನ ನಂ.1 ಬ್ಯಾಟರ್!

ಈ ಟೂರ್ನಿಯ 5 ಇನ್ನಿಂಗ್ಸ್‌ಗಳಲ್ಲಿ 70, 22, 160, 51 ಹಾಗೂ 58 ರನ್* ಗಳಿಸುವ ಮೂಲಕ ಆರ್ಯವೀರ್ ಒಟ್ಟು 361 ರನ್ ಕಲೆಹಾಕಿ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ಫೈನಲ್‌ನಲ್ಲಿ ಶತಕ (107) ಸಿಡಿಸಿದ ಪಾಕಿಸ್ತಾನದ ಉಸ್ಮಾನ್ ಖಾನ್ (345 ರನ್) ಅವರನ್ನು ಆರ್ಯವೀರ್ ಹಿಂದಿಕ್ಕಿದ್ದಾರೆ. ಕೆಲವೇ ತಿಂಗಳ ಹಿಂದಷ್ಟೇ ಭಾರತ ಅಂಡರ್-19 ತಂಡದ ಕ್ಯಾಪ್ ಪಡೆದಿದ್ದ ಆರ್ಯವೀರ್, ತಮ್ಮ ಆಯ್ಕೆಯನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಟೀಮ್ ಇಂಡಿಯಾ; 9ನೇ ವಿಕೆಟ್‌ಗೆ ಆರ್ಯನ್–ಮೋಹಿತ್ ದಾಖಲೆಯ ಜೊತೆಯಾಟದಲ್ಲಿ ಐತಿಹಾಸಿಕ ಗೆಲುವು

Advertisement

ತಂದೆ ವೀರೇಂದ್ರ ಸೆಹ್ವಾಗ್ ಶೈಲಿಯಲ್ಲೇ ಬೌಂಡರಿಗಳ ಅಬ್ಬರ!

 ಅಕ್ಟೋಬರ್ 19, 2007ರಂದು ಜನಿಸಿದ ದೆಹಲಿಯ ಬಲಗೈ ಆರಂಭಿಕ ಬ್ಯಾಟರ್ ಆರ್ಯವೀರ್ (ಸಾಂದರ್ಭಿಕ ಲೆಗ್-ಬ್ರೇಕ್ ಬೌಲರ್ ಕೂಡ ಹೌದು), ಬ್ಯಾಟಿಂಗ್ ಶೈಲಿಯಲ್ಲಿ ತಮ್ಮ ತಂದೆ ವೀರೇಂದ್ರ ಸೆಹ್ವಾಗ್ ಅವರನ್ನೇ ಹೋಲುತ್ತಾರೆ. ಫೈನಲ್‌ಗೂ ಮುನ್ನ ಟೂರ್ನಿಯಲ್ಲಿ ಗಳಿಸಿದ್ದ 303 ರನ್‌ಗಳಲ್ಲಿ ಬರೋಬ್ಬರಿ 29 ಬೌಂಡರಿ ಮತ್ತು 16 ಸಿಕ್ಸರ್‌ಗಳು ಸೇರಿದ್ದವು. ಈ ಹಿಂದೆ ಮೇಘಾಲಯ ವಿರುದ್ಧ 297 ರನ್ (51 ಬೌಂಡರಿ, 3 ಸಿಕ್ಸರ್), ಚಂಡೀಗಢ ವಿರುದ್ಧ 173 ರನ್ (19 ಬೌಂಡರಿ, 8 ಸಿಕ್ಸರ್) ಹಾಗೂ ಯುಎಇ ವಿರುದ್ಧ 160 ರನ್ (17 ಬೌಂಡರಿ, 7 ಸಿಕ್ಸರ್) ಸಿಡಿಸಿದ್ದ ಆರ್ಯವೀರ್, ಫೀಲ್ಡರ್‌ಗಳನ್ನು ದಾಟಿ ಚೆಂಡನ್ನು ಬೌಂಡರಿಗೆ ಅಟ್ಟುವುದರಲ್ಲೇ ಹೆಚ್ಚು ರನ್ ಗಳಿಸುವ ಮೂಲಕ ‘ಜೂನಿಯರ್ ಸೆಹ್ವಾಗ್’ ಎನಿಸಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement