ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅತ್ಯಂತ ಪವಿತ್ರ ಹಾಗೂ ಮಹತ್ವದ ಸ್ಥಾನ ಪಡೆದಿರುವ ‘ಆಟಿ ಅಮಾವಾಸ್ಯೆ’ (Aati Amavasya 2026) ಹಬ್ಬವನ್ನು ಈ ವರ್ಷ ಆಗಸ್ಟ್ 12, 2026 (ಬುಧವಾರ) ರಂದು ಕರಾವಳಿಯಾದ್ಯಂತ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತದೆ.
ಆಷಾಢ ಮಾಸದ ಈ ಅಮಾವಾಸ್ಯೆಯನ್ನು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಭಾಗಗಳಲ್ಲಿ ‘ಆಟಿ ಅಮಾವಾಸ್ಯೆ’ ಎಂದೂ, ಬಯಲು ಸೀಮೆಯಲ್ಲಿ ‘ಭೀಮನ ಅಮಾವಾಸ್ಯೆ’ ಅಥವಾ ‘ಆಷಾಢ ಅಮಾವಾಸ್ಯೆ’ ಎಂದೂ ಕರೆಯಲಾಗುತ್ತದೆ.
ಆಟಿ ಅಮಾವಾಸ್ಯೆಯ ಪ್ರಮುಖ ಆಚರಣೆಗಳು:
ಔಷಧೀಯ ‘ಪಾಲೆದ ಕಷಾಯ’ (ಪಾಳೆ ಮರದ ಕಷಾಯ):
ಆಟಿ ಅಮಾವಾಸ್ಯೆಯ ಪ್ರಮುಖ ಆಕರ್ಷಣೆಯೆಂದರೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ‘ಪಾಲೆದ ಕಷಾಯ’ (Devils Tree Bark Decoction). ಸಾಂಪ್ರದಾಯಿಕ ನಂಬಿಕೆಯಂತೆ, ಅಮಾವಾಸ್ಯೆಯಂದು ಪಾಳೆ ಮರದಲ್ಲಿ 108 ಗಿಡಮೂಲಿಕೆಗಳ ಔಷಧೀಯ ಗುಣಗಳು ಅಡಗಿರುತ್ತವೆ.
ಈ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತಂದು, ಓಂಕಾಳು, ಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿ ಕಷಾಯ ತಯಾರಿಸಿ ಕುಡಿಯಲಾಗುತ್ತದೆ. ಇದು ವರ್ಷಪೂರ್ತಿ ದೇಹದ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ಪ್ರತೀತಿ.
ಮೆಂತ್ಯ ಗಂಜಿ (ಮೆತ್ತೆದ ಗಂಜಿ):
ಕಷಾಯ ಸೇವನೆಯ ನಂತರ ಕಹಿ ತಣಿಸಲು ಹಾಗೂ ದೇಹಕ್ಕೆ ತಂಪು ನೀಡಲು ಮೆಂತ್ಯ, ಬೆಲ್ಲ, ತೆಂಗಿನಹಾಲು ಹಾಗೂ ಅಕ್ಕಿ ಬಳಸಿ ತಯಾರಿಸಿದ ವಿಶೇಷ ‘ಮೆಂತ್ಯ ಗಂಜಿ’ಯನ್ನು ಸೇವಿಸಲಾಗುತ್ತದೆ.
ಪವಿತ್ರ ತೀರ್ಥಸ್ನಾನ ಹಾಗೂ ಪಿತೃ ತರ್ಪಣ:
ಈ ದಿನ ಕರಾವಳಿಯ ಪ್ರಸಿದ್ಧ ಕ್ಷೇತ್ರಗಳಾದ ನರಹರಿ ಪರ್ವತ, ಕಾರಿಂಜೇಶ್ವರ, ಕಾರಂಜಿಕಾಡು ಹಾಗೂ ವಿವಿಧೆಡೆ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡಿ ಪಿತೃಗಳಿಗೆ ತರ್ಪಣ ಅರ್ಪಿಸುತ್ತಾರೆ.
ಇದನ್ನೂ ಓದಿ: Uttar Pradesh: ಸತತ 48 ಗಂಟೆಗಳ ಕಾಲ ಹನುಮಾನ್ ಮೂರ್ತಿಗೆ ಪ್ರದಕ್ಷಿಣೆ ಹಾಕಿದ ನಾಯಿ
ಆಟಿ ಅಮಾವಾಸ್ಯೆ 2026 ಸಮಯ (Tithi Timings):
ಅಮಾವಾಸ್ಯೆ ತಿಥಿ ಪ್ರಾರಂಭ: ಆಗಸ್ಟ್ 12, 2026ರ ಬೆಳಗ್ಗೆ 01:52 ಕ್ಕೆ.
ಅಮಾವಾಸ್ಯೆ ತಿಥಿ ಮುಕ್ತಾಯ: ಆಗಸ್ಟ್ 12, 2026ರ ರಾತ್ರಿ 11:06 ಕ್ಕೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

