ಉಡುಪಿ: ನಗರ ಪಾಲಿಕೆಯಲ್ಲಿ ತೆರಿಗೆ ಪಾವತಿ ರಸೀದಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಉಡುಪಿ ನಗರ ಘಟಕವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ನಗರ ಘಟಕದ ಅಧ್ಯಕ್ಷ ದಿನೇಶ್ ಅಮೀನ್ ಅವರ ನೇತೃತ್ವದಲ್ಲಿ ಈ ಮನವಿಯನ್ನು ಸಲ್ಲಿಸಲಾಗಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶ ಬಹಿರಂಗಗೊಳಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ.
ನಗರಸಭೆಯಲ್ಲಿ ತೆರಿಗೆ ಪಾವತಿ ರಸೀದಿಗಳಲ್ಲಿ ಅಕ್ರಮ ನಡೆದಿದೆ ಎಂಬುದು ಬೆಳಕಿಗೆ ಬಂದಿದ್ದು, ಈ ಸಂಬಂಧ ನಗರಸಭೆ ಆಯುಕ್ತರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಆಸ್ತಿ ತೆರಿಗೆ ಪಾವತಿ ಚಲನ್ಗಳ ಮೇಲೆ ನಕಲಿ ಬ್ಯಾಂಕ್ ಮುದ್ರೆಗಳನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಮತ್ತು ಆತಂಕ ಉಂಟಾಗಿದೆ. ನಕಲಿ ರಶೀದಿ ಪ್ರಕರಣಗಳು ಒಂದರ ಹಿಂದೆ ಒಂದಾಗಿ ಬೆಳಕಿಗೆ ಬರುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಅಪ್ರಾಪ್ತೆಯ ಮುದ್ದಾಡಿ ಅನುಚಿತ ವರ್ತನೆ: ದೇವಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪ್ರಕರಣ ದಾಖಲು
ಉಡುಪಿ ನಗರಸಭೆ ತನ್ನ ಗೌರವ ಮತ್ತು ಪ್ರತಿಷ್ಠೆಯನ್ನು ಸದಾ ಕಾಪಾಡಿಕೊಂಡು ಬಂದಿದ್ದು, ಇಂತಹ ಘಟನೆಗಳು ನಾಗರಿಕರಲ್ಲಿ ಆತಂಕ ಉಂಟುಮಾಡುವುದರ ಜೊತೆಗೆ ನಗರಸಭೆಯ ಗೌರವಕ್ಕೂ ಧಕ್ಕೆಯಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಇತ್ತೀಚೆಗೆ ಸಾರ್ವಜನಿಕ ನಿಧಿಗಳ ದುರುಪಯೋಗ ಕುರಿತು ಹಲವು ವರದಿಗಳು ಕೇಳಿಬಂದಿರುವುದನ್ನೂ ಉಲ್ಲೇಖಿಸಿದ ಬಿಜೆಪಿ, ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಅಥವಾ ನಗರಸಭೆಯ ಸಿಬ್ಬಂದಿ ಭಾಗಿಯಾಗಿರುವುದು ಸಾಬೀತಾದರೆ ಸಂಬಂಧಿಸಿದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಇದಲ್ಲದೆ, ಸಮಗ್ರ ಇಲಾಖಾ ತನಿಖೆ ನಡೆಸಿ, ನ್ಯಾಯಾಂಗ ತನಿಖೆಗೆ ಹಸ್ತಾಂತರಿಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಗರಸಭೆಯ ಕಾರ್ಯಪದ್ಧತಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವ ಮೂಲಕ ಸಾರ್ವಜನಿಕ ವಿಶ್ವಾಸವನ್ನು ಮರುಸ್ಥಾಪಿಸಬೇಕೆಂದು ಬಿಜೆಪಿ ನಾಯಕರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

