ಅಂಬಿಕಾಪುರ (ಛತ್ತೀಸ್‌ಗಢ): ಪವಿತ್ರ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಛತ್ತೀಸ್‌ಗಢದಲ್ಲಿ ಅಮಾನವೀಯ ಕೃತ್ಯವೊಂದು ಜರುಗಿದೆ. ಕುಡಿದ ಮತ್ತಿನಲ್ಲಿ ತಂದೆಯ ಜೊತೆ ಜಗಳವಾಡಿದ ಮಗ, ಕೊಡಲಿಯಿಂದ ತಂದೆಯನ್ನೇ ಭೀಕರವಾಗಿ ಹತ್ಯೆ ಮಾಡಿ, ನಂತರ ಏನೂ ತಿಳಿಯದವನಂತೆ ಬಿರಿಯಾನಿ ತಿಂದು ಮಲಗಿರುವ ಘಟನೆ ಬೆಳಕಿಗೆ ಬಂದಿದೆ. ಹೋಳಿ ಹಬ್ಬದ ರಾತ್ರಿ ಆರೋಪಿ ಮಗ ಪ್ರಭಾತ್ ಅಲಿಯಾಸ್ ಲೆಡಾ ಎಂಬಾತ ಕುಡಿದು ಮನೆಗೆ ಬಂದಿದ್ದ. ಈ ವೇಳೆ ತಂದೆ ಪರಾಸ್ ಕರ್ಕೆಟ್ಟಾ ಮಗನನ್ನು ಬೈದಿದ್ದರು. ಇದೇ ವಿಷಯವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಆಕ್ರೋಶಗೊಂಡ ಪ್ರಭಾತ್, ಕೊಡಲಿಯಿಂದ ತಂದೆಯ ತಲೆಗೆ ಹಲವು ಬಾರಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಪರಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆಯ ನಂತರ ಮಗ ತಂದೆಯ ಶವವನ್ನು ಎಳೆದುಕೊಂಡು ಹೋಗಿ ಮನೆಯ ಪಕ್ಕದಲ್ಲಿದ್ದ ಸಣ್ಣ ನೀರಿನ ಟ್ಯಾಂಕ್‌ಗೆ ಎಸೆದಿದ್ದಾನೆ.

ಇಷ್ಟೆಲ್ಲಾ ಆದರೂ ಕಿಂಚಿತ್ತೂ ಭಯ ಅಥವಾ ಪಶ್ಚಾತ್ತಾಪವಿಲ್ಲದ ಮಗ, ಹತ್ತಿರದ ಅಂಗಡಿಗೆ ಹೋಗಿ ಬಿರಿಯಾನಿ ಕೊಂಡು ತಂದಿದ್ದಾನೆ. ಅದನ್ನು ತಿಂದು ನಂತರ ಹೊದಿಕೆ ಹೊದ್ದು ನೆಮ್ಮದಿಯಿಂದ ನಿದ್ರಿಸಿದ್ದಾನೆ. ಮರುದಿನ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ “ಕೋಪದ ಭರದಲ್ಲಿ ಈ ಕೆಲಸ ಮಾಡಿದೆ” ಎಂದು ಆತ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

