ನೀಮುಚ್ : ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರಣಪುರ ಗ್ರಾಮದಲ್ಲಿ ಸುಮಾರು 20 ಮಕ್ಕಳ ಪ್ರಾಣ ಉಳಿಸಲು ಅಂಗನವಾಡಿ ಅಡುಗೆಯವರೊಬ್ಬರು ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ.
ಮಡಾವಡ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ, ಹಠಾತ್ತನೆ ಜೇನುನೊಣಗಳ ಗುಂಪು ದಾಳಿ ಮಾಡಿತು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಅಡುಗೆಯವರಾದ ಕಾಂಚನ್ ಬಾಯಿ ಮೇಘವಾಲ್, ಒಂದು ಕ್ಷಣ ಯೋಚಿಸದೆ ಮಕ್ಕಳ ರಕ್ಷಣೆಗೆ ಧಾವಿಸಿದರು. ಹತ್ತಿರದಲ್ಲಿದ್ದ ಟಾರ್ಪಾಲಿನ್ ಮತ್ತು ಚಾಪೆಗಳನ್ನು ಬಳಸಿ ಪ್ರತಿಯೊಬ್ಬ ಮಗುವನ್ನು ಸುತ್ತಿ, ತಮ್ಮ ದೇಹವನ್ನು ಜೇನುನೊಣಕ್ಕೆ ಅಡ್ಡವಾಗಿಸಿ ಮಕ್ಕಳನ್ನು ಸುರಕ್ಷಿತವಾಗಿ ಅಂಗನವಾಡಿ ಕೇಂದ್ರದ ಒಳಗೆ ಸೇರಿಸಿದರು.

ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬಾರಿಗೆ ಬೋಟ್ ಆಂಬುಲೆನ್ಸ್ ಸೇವೆ ಆರಂಭಸಿದ ಉಳ್ಳಾಲ ಮೀನುಗಾರರು
ಜೇನುನೊಣಗಳು ಮತ್ತು ಮಕ್ಕಳ ನಡುವೆ ತಡೆಗೋಡೆಯಂತೆ ನಿಂತ ಕಾಂಚನ್ ಬಾಯಿ ಅವರ ಮೇಲೆ ಇಡೀ ಜೇನುನೊಣಗಳ ದಂಡು ಎರಗಿತು. ನೂರಾರು ಜೇನುನೊಣಗಳು ಕಾಂಚನ್ ಬಾಯಿ ಅವರಿಗೆ ಕಚ್ಚಿದರೂ, ಕೊನೆಯ ಮಗುವನ್ನು ಅಂಗನವಾಡಿ ಕೇಂದ್ರದೊಳಗೆ ಸುರಕ್ಷಿತವಾಗಿ ಒಯ್ಯುವವರೆಗೆ ಅವರು ಹೆದರದೆ ರಕ್ಷಣಾ ಕಾರ್ಯವನ್ನು ಮಾಡುತ್ತಲೇ ಇದ್ದರು.

ಗ್ರಾಮಸ್ಥರು ಸಹಾಯಕ್ಕೆ ಧಾವಿಸುವಷ್ಟರಲ್ಲಿ ಕಾಂಚನ್ ಬಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕಾನ್ಸ್ಟೇಬಲ್ ಕಾಲುನಾಥ ಮತ್ತು ಪೈಲಟ್ ರಾಜೇಶ ರಾಥೋಡ್ ತಕ್ಷಣವೇ ಕಾಂಚನ್ ಬಾಯಿ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಅವರ ದೇಹದಾದ್ಯಂತ ಇದ್ದ ಅಸಂಖ್ಯಾತ ಜೇನುನೊಣಗಳ ಕಡಿತದ ಗುರುತುಗಳು ಅವರ ಧೈರ್ಯಕ್ಕೆ ಸಾಕ್ಷಿಯಾಗಿದ್ದವು.
ಕಾಂಚನ್ ಬಾಯಿ ಕೇವಲ ಅಂಗನವಾಡಿ ಕಾರ್ಯಕರ್ತೆಯಾಗಿರಲಿಲ್ಲ, ಅವರು ‘ಜೈ ಮಾತಾ ದಿ’ ಸ್ವಸಹಾಯ ಸಂಘದ ಅಧ್ಯಕ್ಷೆಯೂ ಆಗಿದ್ದರು. ಅವರ ಪತಿ ಶಿವಲಾಲ ಪಾರ್ಶ್ವವಾಯು ಪೀಡಿತರಾಗಿದ್ದು, ಕುಟುಂಬದ ಸಂಪೂರ್ಣ ಜವಾಬ್ದಾರಿ ಕಾಂಚನ್ ಬಾಯಿ ಅವರ ಮೇಲಿತ್ತು. ಅವರು ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳವಾರ ಮರಣೋತ್ತರ ಪರೀಕ್ಷೆಯ ನಂತರ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಬಂದಾಗ, ಇಡೀ ರಣಪುರ ಗ್ರಾಮವೇ ಮೌನವಾಗಿ ನಿಂತು ಈ ವೀರ ವನಿತೆಗೆ ಗೌರವ ಸಲ್ಲಿಸಿತು.
ಘಟನೆಯ ನಂತರ ಗ್ರಾಮದಲ್ಲಿ ಭೀತಿ ಆವರಿಸಿದೆ. ಅಂಗನವಾಡಿ ಕೇಂದ್ರದ ಪಕ್ಕದಲ್ಲಿರುವ ಮರದ ಮೇಲೆಯೇ ಬೃಹತ್ ಜೇನುಗೂಡು ಇನ್ನು ಹಾಗೆಯೇ ಇದೆ. ಇದೇ ಜಾಗದಲ್ಲಿ ಗ್ರಾಮದ ಏಕೈಕ ಕೈಪಂಪು ಸಹ ಇರುವುದರಿಂದ, ಜನರು ನೀರು ಒಯ್ಯಲು ಬರಲು ಹೆದರುತ್ತಿದ್ದಾರೆ. ಕೂಡಲೇ ಜೇನುಗೂಡನ್ನು ತೆರವುಗೊಳಿಸಬೇಕು ಮತ್ತು ಕಾಂಚನ್ ಬಾಯಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

