ಪುತ್ತೂರು: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪ ಸಂಬಂಧ ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಎಸ್‌ಸಿ ಮೋರ್ಚಾದ ಅಧ್ಯಕ್ಷ ಲೋಹಿತ್ ಅಮ್ಚಿನಡ್ಕ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಫೆ.೧೫ ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಶಾಸಕ ಅಶೋಕ್ ರೈ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಛಲವಾದಿ ನಾರಾಯಣ ಸ್ವಾಮಿ ಅವರನ್ನು ಅತ್ಯಂತ ಕೀಳು ಪದಗಳಲ್ಲಿ ಬೈದಿದ್ದು, ಅವರನ್ನು ನಾಯಿ, ಬುದ್ದಿ ಇಲ್ಲದವನು, ನಾಲಾಯಕ್ ಎಂಬ ಪದಗಳಿಂದ ಏಕವಚನದಲ್ಲಿ ಅತ್ಯಂತ ನಿಕೃಷ್ಟವಾಗಿ ತೆಗಳಿದ್ದಾರೆ.

ಇದನ್ನೂ ಓದಿ: T20 Worldcup: ಯುಎಇ ವಿರುದ್ಧ ಸುಲಭ ಜಯ ದಾಖಲಿಸಿದ ಅಪ್ಘಾನಿಸ್ತಾನ
ಛಲವಾದಿ ನಾರಾಯಣಸ್ವಾಮಿ ಅವರು ವಿಧಾನಪರಿಷತ್ ಸದಸ್ಯರಾಗಿದ್ದು, ಪರಿಷತ್‌ನ ವಿಪಕ್ಷ ನಾಯಕರೂ ಆಗಿದ್ದಾರೆ. ಸಂವಿಧಾನಿಕವಾಗಿ ರಾಜ್ಯದಲ್ಲಿ ಉನ್ನತ ಹುದ್ದೆಯಲ್ಲಿರುವವರಾಗಿದ್ದಾರೆ. ಅಲ್ಲದೆ, ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಹಿಂದುಳಿದ ಪರಿಶಿಷ್ಟ ಜಾತಿ ಸಮುದಾಯದ ನಾಯಕರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಶೋಕ್ ರೈ ಹೇಳಿಕೆ
ಶಾಸಕ ಅಶೋಕ್ ರೈ ಅವರು, “ನಾಯಿ ಇದೆ ಅಲ್ಲ, ಅದು ಕಳ್ಳ ಬಂದರೂ ಬೊಗಳುತ್ತದೆ, ಒಳ್ಳೆಯವರು ಬಂದರೂ ಬೊಗಳುತ್ತದೆ. ಈ ಛಲವಾದಿ ಕೂಡ ಅದೇ ನಾಯಿ ತರಹ, ಅವನಿಗೆ ಯಾವುದು ಒಳ್ಳೆಯದು, ಯಾವುದು ಏನು ಅಂತ ಗೊತ್ತಾಗುವುದಿಲ್ಲ. ಅದಕ್ಕೆ ಏನು ಮಾಡುವುದು. ಅದಕ್ಕೆ ನಾನು ಕಲ್ಲು ಬಿಸಾಕುವುದಿಲ್ಲ, ಮತ್ತೆ ಅವ ಒಬ್ಬ ನರ್ಸಣ್ಣನ ತರಹ ಪುಂಗಿ ಹಿಡಿದು ಬರುತ್ತಿದ್ದಾರಲ್ಲಾ, ಪಾಪ ಅವರಿಗೆ ಬುದ್ದಿ ಇತ್ತು. ಇವರಿಗೆ ಬುದ್ದಿ ಇಲ್ಲ. ಅವರಿಗೆ ನೀವು ಯಾರೂ ಚಲವಾದಿ ನಾರಾಯಣ ಸ್ವಾಮಿ ಅಂತ ಕರೆಯುತ್ತೀರಾ? ಅವ ಛಲವಾದಿ ನಾಲಾಯಕ್ ಸ್ವಾಮಿ, ಪಾಪಾ ಅವೆಲ್ಲಾ ಮೇಲ್ಗಡೆಯಿಂದ ಬಂದು ಬೊಗಳಿ ಹೋಗುತ್ತದೆ. ಇಂತಹವರನ್ನು ತಂದು ಬೊಗಳಿಸಿ ನಮ್ಮ ಬಾಂಧವ್ಯ ಯಾಕೆ ಹಾಳು ಮಾಡಬೇಕು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕವಾಗಿ ಒಬ್ಬ ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದ ವ್ಯಕ್ತಿಯನ್ನು ಕೀಳು ಭಾವನೆ ಇಟ್ಟುಕೊಂಡು ರಾಜ್ಯದ ವಿರೋಧ ಪಕ್ಷದ ನಾಯಕರಾದವರನ್ನು, ಪರಿಶಿಷ್ಟ ಜಾತಿ ಸಮುದಾಯದ ವ್ಯಕ್ತಿ ಎಂಬ ಕೀಳರಿಮೆ ಮಾಡಿ, ಅವರ ಬಗ್ಗೆ ಮಾನಹಾನಿಕಾರಕ ಪದಗಳಲ್ಲಿ ಹಾಗೂ ಜಾತಿ ನಿಂದನೆ ಮಾಡುವ ಪದಗಳನ್ನು ಸಮುದಾಯದ ನಡುವೆ ದ್ವೇಷ ಭಾವನೆ ಮೂಡುವ ರೀತಿಯಲ್ಲಿ ಮಾತುಗಳನ್ನಾಡಿದ್ದಾರೆ.
ಛಲವಾದಿಯವರು ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಒಂದು ಕೀಳರಿಮೆ ಭಾವನೆಯಿಂದಲೇ ಅಶೋಕ್ ರೈ ಅವರು ಸಮುದಾಯದ ಹೆಸರನ್ನು ಸೂಚಿಸಿ ಸಾರ್ವಜನಿಕಾಗಿ ಸಮುದಾಯವನ್ನು ಸಮುದಾಯದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರನ್ನು ನಿಂದಿಸಿದ್ದಾರೆ.
ಆ ಮೂಲಕ ಪರಿಶಿಷ್ಟ ಜಾತಿ ಸಮುದಾಯಗಳ ಭಾವನೆಯನ್ನು ಕೆರಳಿಸಿ ಸಾರ್ವಜನಿಕವಾಗಿ ದ್ವೇಷ ಭಾವನೆ ಉಂಟಾಗುವಂತೆ ಮಾಡಿದ್ದಾರೆ. ಈ ಜಾತಿಯ ಬಗ್ಗೆ ಕೀಳಾಗಿ ಮಾತನಾಡಲು ಸಾರ್ವಜನಿಕರಿಗೆ ಪ್ರಚೋದಿಸಿದಂತೆ ಆಗುತ್ತದೆ. ಹೀಗಾಗಿ ಅಶೋಕ್ ರೈ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

