ಬಂಟ್ವಾಳ: ಇತ್ತೀಚಿನ ದಿನಗಳಲ್ಲಿ ಮಕ್ಕಳು ದೂರದರ್ಶನದ ಮುಂದೆ ಕುಳಿತುಕೊಂಡರೆ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಅರಿವಿಲ್ಲದಂತೆ ಅದರಲ್ಲೇ ಮಗ್ನರಾಗುವುದು ಸಾಮಾನ್ಯ. ಈ ನಡುವೆ ಬಂಟ್ವಾಳ ತಾಲೂಕಿನಲ್ಲಿ ಬಾಲಕನೊಬ್ಬ ಟಿವಿ ನೋಡುತ್ತಿದ್ದ ವೇಳೆ ಆಕಸ್ಮಿಕವಾಗಿ ರಿಮೋಟ್‌ನ ಬ್ಯಾಟರಿಯನ್ನು ನುಂಗಿದ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, 13 ವರ್ಷದ ಬಾಲಕ (ಪೋಷಕರ ಕೋರಿಕೆಯ ಮೇರೆಗೆ ಹೆಸರು ಹಾಗೂ ಊರಿನ ವಿವರವನ್ನು ಗೌಪ್ಯವಾಗಿಡಲಾಗಿದೆ) ಭಾನುವಾರ ಮನೆಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಟಿವಿ ವೀಕ್ಷಿಸುತ್ತಿದ್ದಾಗ ರಿಮೋಟ್‌ನ ಬ್ಯಾಟರಿಯನ್ನು ಬಾಯಿಗೆ ಹಾಕಿಕೊಂಡಿದ್ದು, ಅಜಾಗರೂಕತೆಯಿಂದ ಅದು ಗಂಟಲೊಳಗೆ ಜಾರಿದೆ. ತಕ್ಷಣವೇ ಆತಂಕಗೊಂಡ ಪೋಷಕರು, ನೈಸರ್ಗಿಕವಾಗಿ ಬ್ಯಾಟರಿ ಹೊರಹೋಗಲು ಊಟ ಹಾಗೂ ಬಾಳೆಹಣ್ಣುಗಳನ್ನು ತಿನ್ನಿಸಿದ್ದಾರೆ.
ಬಳಿಕ ಬಿ.ಸಿ. ರೋಡಿನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿದಾಗ ಬ್ಯಾಟರಿ ಅಡ್ಡಲಾಗಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ವೈದ್ಯರ ಸಲಹೆ ಮೇರೆಗೆ ಕೂಡಲೇ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಪ್ರವೃತ್ತರಾದ ವೈದ್ಯರು, ಲ್ಯಾಪರೋಸ್ಕೋಪಿ ಮೂಲಕ ಅದನ್ನು ಹೊರತೆಗೆಯಲು ನಿರ್ಧರಿಸಿದ್ದಾರೆ. ಆದರೆ ನೈಸರ್ಗಿಕವಾಗಿ ಬ್ಯಾಟರಿ ಹೋಗಲೆಂದು ಊಟ, ಬಾಳೆಹಣ್ಣುಗಳನ್ನು ನೀಡಿದ ಪರಿಣಾಮ ಚಿಕಿತ್ಸೆ ನಡೆಸಲು ಸಾಧ್ಯವಾಗಿಲ್ಲ.
ಎರಡು ಬಾರಿ ಪ್ರಯತ್ನಿಸಿದರೂ ಊಟ ಜೀರ್ಣವಾಗದೇ ಉಳಿದ ಪರಿಣಾಮ ಚಿಕಿತ್ಸೆ ಸಾಧ್ಯವಾಗಿಲ್ಲ. ಹೀಗಾಗಿ ಊಟ ಜೀರ್ಣಗೊಂಡ ನಂತರ ಸೋಮವಾರ ಬೆಳಗ್ಗೆ 10 ಗಂಟೆಗೆ ವೈದ್ಯರು ಯಶಸ್ವಿಯಾಗಿ ಬ್ಯಾಟರಿಯನ್ನು ಹೊರತೆಗೆದಿದ್ದಾರೆ.
ಲ್ಯಾಪರೋಸ್ಕೋಪಿ ವಿಧಾನವು ಕಡಿಮೆ ನೋವು, ಕಡಿಮೆ ರಕ್ತಸ್ರಾವ ಹಾಗೂ ಶೀಘ್ರ ಚೇತರಿಕೆಗೆ ಅನುಕೂಲವಾಗುವ ಆಧುನಿಕ ಚಿಕಿತ್ಸಾ ವಿಧಾನವಾಗಿದ್ದು, ಯಶಸ್ವಿ ಶಸ್ತ್ರಚಿಕಿತ್ಸೆಯ ಬಳಿಕ ಬಾಲಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಸದ್ಯ ಸುಧಾರಿಸುತ್ತಿದ್ದಾನೆ ಎಂದು ಪೋಷಕರು ತಿಳಿಸಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


