ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ ನಡೆದಿದ್ದ ಯುವತಿ ಲಾವಣ್ಯ ಅವರ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಚೇತನ್‌ನನ್ನು ಬಂಟ್ವಾಳ ನ್ಯಾಯಾಲಯ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದು, ಘಟನೆ ನಡೆದ ಸ್ಥಳದಲ್ಲೇ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಕಳೆದ ಜುಲೈ 16 ರಂದು ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಅವರನ್ನು ಬರ್ಬರವಾಗಿ ಕೊಲೆ ಮಾಡಿದ ಬಳಿಕ ಆರೋಪಿ ಚೇತನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಆರಂಭದಲ್ಲಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗಿತ್ತು.
ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ (Discharge) ಬಂಟ್ವಾಳ ನಗರ ಪೊಲೀಸರು ಆತನನ್ನು ವಶಕ್ಕೆ ಪಡೆದು, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಇದನ್ನೂ ಓದಿ: ಬಂಟ್ವಾಳ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸತ್ಯ ಬಹಿರಂಗಪಡಿಸಿದ ಎಸ್‌ಪಿ ಅರುಣ್ ಕೆ
ಆರೋಪಿಯ ಹೆಚ್ಚಿನ ವಿಚಾರಣೆ ಹಾಗೂ ಕೊಲೆಗೆ ಬಳಸಿದ ಆಯುಧ ಸೇರಿದಂತೆ ಪ್ರಮುಖ ಸಾಕ್ಷ್ಯಗಳ ಸಂಗ್ರಹಕ್ಕಾಗಿ ಬಂಟ್ವಾಳ ಪೊಲೀಸರು ನ್ಯಾಯಾಲಯದಲ್ಲಿ ಕಸ್ಟಡಿಗೆ ಮನವಿ ಮಾಡಿದ್ದರು. ಪರಿಶೀಲಿಸಿದ ಬಂಟ್ವಾಳ ಕೋರ್ಟ್ ಆರೋಪಿಯನ್ನು ೪ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಕಸ್ಟಡಿಗೆ ಪಡೆದ ತಕ್ಷಣವೇ ಬಿಗಿಯಾದ ಪೊಲೀಸ್ ಭದ್ರತೆಯಲ್ಲಿ ಆರೋಪಿ ಚೇತನ್‌ನನ್ನು ಕೊಲೆ ನಡೆದ ಜಾಗವಾದ ಬಿ.ಸಿ. ರೋಡ್ KSRTC ಬಸ್ ನಿಲ್ದಾಣಕ್ಕೆ ಕರೆತಂದ ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

