Breaking News

ಮಂಚಿ ಹಿಂದೂ ಸಂಗಮ; ಹಿಂದುತ್ವ ಮತ್ತು ಭಾರತ ಎರಡೂ ಒಂದೆ: ಗಿರೀಶ್ ಕಾಟಿಪಲ್ಲ

Bantwal news Hindu Sangama at Manchi Kukkaje speech by Girish Katipalla

ಬಂಟ್ವಾಳ: ವಿಟ್ಲ ತಾಲೂಕು, ಮಂಚಿ ಮಂಡಲದಿಂದ ಮಂಚಿ ಮತ್ತು ಸಾಲೆತ್ತೂರು ಗ್ರಾಮಗಳನ್ನೊಳಗೊಂಡ ಹಿಂದೂ ಸಂಗಮ ಫೆ.1 ರಂದು ಕುಕ್ಕಾಜೆಯ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಮುಂಭಾಗದಲ್ಲಿ ನಡೆಯಿತು.

ಸುಳ್ಯ ಶ್ರೀ ಮಹಾದೇವ ದೇವಸ್ಥಾನದ ದ್ವಾರದ ಬಳಿಯಿಂದ ಹೊರಟ ಶೋಭಾ ಯಾತ್ರೆಗೆ ಹಿಂದೂ ಮುಖಂಡರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಭಗವದ್ಗೀತೆ ಪಠಣ, ಕುಣಿತ ಭಜನೆಯೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಪ್ರಭು ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯನ ವೇಷ ಧರಿಸಿದ ಮಕ್ಕಳು ಒಂದೆಡೆ ಜನರನ್ನು ಆಕರ್ಷಿಸಿದರೆ, ಇನ್ನೊಂದೆಡೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿರುವ ಬಾಲರಾಮನನ್ನು ಹೋಲುವಂತೆ ಬಾಲಕಿ ಹಾಕಿದ ವೇಷ ನೋಡುಗರ ಗಮನ ಸೆಳೆಯಿತು.

Advertisement

ಹೀಗೆ ಸಾಗಿದ ಮೆರವಣಿಗೆ ಮಂದಿರದ ಮುಂದೆ ಸಂಪದವಾಯಿತು. ಇಲ್ಲಿ ಗೋಪೂಜೆ ನೆರವೇರಿಸಿದ ನಂತರ ದೀಪ ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ದಿಕ್ಸೂಚಿ ಭಾಷಣ ಮಾಡಿದ ಆರ್‌ಎಸ್‌ಎಸ್‌ನ ಮಂಗಳೂರು ವಿಭಾಗದ ಧರ್ಮಜಾಗರಣದ ಸಂಯೋಜಕ ಗಿರೀಶ್ ಕಾಟಿಪಲ್ಲ, ಸಂಘವು 100 ನೇ ವರ್ಷದ ಸಂಭ್ರಮದಲ್ಲಿದೆ. ಹಿಂದೂ ಸಂಗಮ ಯಾಕೆ ಮಾಡಬೇಕು ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.  ಹಿಂದೂ ಮತ್ತು ಹಿಂದುತ್ವಕ್ಕೆ ಯಾವುದೇ ಭೇದ ಇಲ್ಲ. ಅದು ಈ ದೇಶದ ಜೀವಾಳವಾಗಿದೆ. ಹಿಂದೆ ಭಾರತದಲ್ಲಿ ನೆಲೆಸಿದ್ದ ಎಲ್ಲರನ್ನೂ ಹಿಂದೂ ಎಂದೇ ಕರೆಯಲಾಗುತ್ತಿತ್ತು. ಹೀಗಾಗಿ ಹಿಂದುತ್ವ ಮತ್ತು ಭಾರತ ಎರಡೂ ಒಂದೆಯಾಗಿದೆ ಎಂದರು.

ಇದನ್ನೂ ಓದಿ: ಪುತ್ತೂರು: ನೂತನ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ

ಇಂದು ಭಾರತ ಎಲ್ಲರಿಗೂ ಪ್ರೇರಣೆಯಾಗಿ ನಿಂತಿದೆ. ಎಲ್ಲರಿಗೂ ಬೇಕಾದ ದೇಶವಾಗಿದೆ. ಕೊರೋನಾ ಕಾಲಘಟ್ಟದಲ್ಲಿ ಜಗತ್ತು ತಲ್ಲಣವಾದಾಗ ಅನೇಕ ದೇಶಗಳಿಗೆ ಲಸಿಕೆಗಳನ್ನು ವಿತರಿಸುವ ಮೂಲಕ ಕೋಟ್ಯಂತರ ಜನರ ಜೀವಗಳನ್ನು ಉಳಿಸಿತ್ತು. ಬೇರೆ ದೇಶಗಳು ತೊಂದರೆಯಲ್ಲಿ ಸಿಲುಕಿದಾಗ ಮೊದಲು ನೆರವಿಗೆ ದಾವಿಸುವುದೇ ಭಾರತ ಎಂದರು.

ಹಿಂದೂಗಳನ್ನು ಜಗತ್ತು ಗೌರವದಿಂದ ನೋಡುತ್ತಿದೆ. ಹಿಂದೂಗಳನ್ನು ಸಂಘಟಿಸಲು ಸಾಧ್ಯವಿಲ್ಲ ಎಂದೂ ಹೇಳಲಾಗುತ್ತದೆ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದೂಗಳನ್ನು ಕಳೆದ 100 ವರ್ಷಗಳಿಂದ ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ. ಇಂತಹ ಸಂಘಟನೆಯನ್ನು ಕೋಮುವಾದಿ ಎಂದು ಟೀಕಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದೂ ಕೋಮುವಾದಿಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿ ನಡೆಯುವ ಪೂಜೆ ವೇಳೆಯಲ್ಲಿ ಸಕಲ ಜೀವರಾಶಿಗಳಿಗೆ ಮಂಗಳವಾಗಲಿದೆ, ಸುಖವಾಗಿರಲಿ ಎಂದು ಹೇಳಲಾಗುತ್ತದೆ. ಇಂತಹ ಶ್ರೇಷ್ಠ ಧರ್ಮ ಹಿಂದೂ ಧರ್ಮ ಎಂದರು.

ಹಿಂದೂಗಳಲ್ಲಿ ಸಾಮರಸ್ಯ ಸಾಧಿಸಬೇಕಿದೆ. ಹಿಂದಿನ ಕುಟುಂಬ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಹಿಂದೂ ಸಂಸ್ಕೃತಿಯ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸಬೇಕಿದೆ. ಸಮಾಜದಲ್ಲಿನ ನಾಗರಿಕ ಶಿಷ್ಟಾಚಾರವನ್ನು ಜನರು ಪಾಲಿಸಬೇಕು. ಸ್ವದೇಶಿ ವಿಚಾರದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ‌ ನಿಟ್ಟಿನಲ್ಲಿ ಹಿಂದೂ ಸಂಗಮ‌ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಕರ್ನಾಟಕದಲ್ಲಿ AI ಪೊಲೀಸ್; ನಿರ್ಮಾಣವಾಗಲಿದೆ ಕಮಾಂಡ್ ಸೆಂಟರ್

ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಮುಖ್ಯಶಿಕ್ಷಕಿ ಡಾ.ವಾರಿಜಾದೇವಿ, ಭಾರತೀಯರಾಗಿ ಹುಟ್ಟಿರುವುದೇ ನಾವು ಮಾಡಿದ ಪುಣ್ಯ. ಸನಾತನ ಧರ್ಮವು ವೈದಿಕತೆಯೊಂದಿಗೆ ಸುತ್ತುತ್ತದೆ. ಪರಿಸರದಲ್ಲೂ ದೇವರನ್ನು ಕಾಣುವ ಇಂತಹ ಶ್ರೇಷ್ಠ ಧರ್ಮಕ್ಕೆ ಜಾತಿ ವ್ಯವಸ್ಥೆ ಎಂಬುದು ಶಾಪವಾಗಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಜನರಲ್ಲಿನ ಜಾಗೃತಿಯಿಂದಾಗಿ ಜಾತಿ ವ್ಯವಸ್ಥೆ ಕಡಿಮೆಯಾಗಿದೆ. ಸನಾತನ ಧರ್ಮದ ಆಚಾರ ವಿಚಾರ, ಸಂಸ್ಕೃತಿಯ ಬಗ್ಗೆ ಪೋಷಕರು ತಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಮಂಚಿ ಘಟಕದ ಅಧ್ಯಕ್ಷ ರಮೇಶ್ ರಾವ್ ಪತ್ತುಮುಡಿ, ಹೆತ್ತ ತಾಯಿ ಬೇರೆ ಬೇರೆಯಾಗಿದ್ದರೂ ನಮ್ಮೆಲ್ಲರ ಮಾತೆ ಭಾರತ ಮಾತೆ. ಈ ಮಾತೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ 100 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ರಚಿಸಿ  ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ಹಿಂದೂ ಸಂಗಮ ಆಯೋಜನಾ ಸಮಿತಿಯ ಸಹಕಾರ್ಯದರ್ಶಿ ಡಾ.ಧನ್ವೀಶ್ ಕಲ್ಲಡ್ಕ, ಉಪಾಧ್ಯಕ್ಷ ಮನೋಜ್ ಕುಮಾರ್ ಕಟ್ಟೆಮಾರ್ ಉಪಸ್ಥಿತರಿದ್ದರು. ಜಯಪ್ರಕಾಶ್ ರೈ ಮೇರಾವು ವಂದಿಸಿದರು‌. ಮಹಾದೇವ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ಪುಷ್ಪರಾಜ್ ಕುಕ್ಕಾಜೆ ನಿರೂಪಿಸಿದರು.

ದೇಶ ಸೇವೆ ಮಾಡಿದ ಐವರು ನಿವೃತ್ತ ಯೋಧರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು