ಬೆಂಗಳೂರನ್ನು ನಡುಗಿಸಿದ್ದ ಸರಣಿ ಹತ್ಯೆ ಪ್ರಕರಣ: 7 ಮೃತದೇಹಗಳ ಪತ್ತೆ ರಹಸ್ಯ ಭೇದಿಸಿದ ಪೊಲೀಸರು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಏಳು ಕೊಲೆಗಳ ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಕುಖ್ಯಾತ ಹಂತಕ ಇಂದುಶೇಖರ್ ಬಲಿಪಶು ಮಾಡಿದ್ದ ಎಲ್ಲಾ 7 ಮೃತದೇಹಗಳನ್ನೂ ಪೊಲೀಸರು ಬೇರೆ ಬೇರೆ ಜಿಲ್ಲೆಗಳ ಬೆಟ್ಟಗುಡ್ಡಗಳು ಹಾಗೂ ಅರಣ್ಯ ಪ್ರದೇಶಗಳಿಂದ ಕೊನೆಗೂ ಪತ್ತೆ ಹಚ್ಚಿದ್ದಾರೆ. ಆರೋಪಿ ಇಂದುಶೇಖರ್‌ನ ಹೆಜ್ಜೆಯನ್ನು ಪತ್ತೆಹಚ್ಚಲು ಮತ್ತು ಆತನ ಸಂಚಿನ ರಹಸ್ಯವನ್ನು ಬಯಲು ಮಾಡಲು ಪೊಲೀಸರು ಬರೋಬ್ಬರಿ 200ಕ್ಕೂ ಹೆಚ್ಚು ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸಿದ್ದು, ಕೃತ್ಯಕ್ಕೆ ಮುನ್ನ ಆತ ನಡೆಸಿದ ಪೂರ್ವಯೋಜಿತ ಸಿದ್ಧತೆಗಳ ಆಘಾತಕಾರಿ ವಿವರಗಳು ಹೊರಬಂದಿವೆ.

ನಿರ್ದಯಿ ಹಂತಕ ಇಂದುಶೇಖರ್ 7 ಮಂದಿಯನ್ನು ಬರ್ಬರವಾಗಿ ಹತ್ಯೆಗೈದು, ಯಾರೂ ಸುಲಭವಾಗಿ ಗುರುತಿಸಲು ಸಾಧ್ಯವಾಗದಂತೆ ಬೇರೆ ಬೇರೆ ದಿಕ್ಕುಗಳ ಕಂದಕ ಹಾಗೂ ಅರಣ್ಯ ಪ್ರದೇಶಗಳಿಗೆ ಶವಗಳನ್ನು ಎಸೆದಿದ್ದನು.

Advertisement
  1. ನಂದಿಬೆಟ್ಟ (ಚಿಕ್ಕಬಳ್ಳಾಪುರ): ಪುನೀತ್ ಅವರ ಮೃತದೇಹ.

  2. ಏರ್ಕಾಡ್ (ತಮಿಳುನಾಡು): ಸುನೀತಾ ಹಾಗೂ ರೂಪವತಿ ಅವರ ಮೃತದೇಹಗಳು.

    Advertisement
  3. ಚಾಮುಂಡಿಬೆಟ್ಟ (ಮೈಸೂರು): ಶಿವಕುಮಾರ್ ಹಾಗೂ ಆತನ ಪತ್ನಿ ದಿವ್ಯಾ ಅವರ ಮೃತದೇಹಗಳು. ಭಾನುವಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಇವರ ಶವಗಳು ಪತ್ತೆಯಾಗಿದ್ದವು. ಜನರು ಹೆಚ್ಚು ಓಡಾಡುವ ವ್ಯೂ ಪಾಯಿಂಟ್ ಸಮೀಪದ ಜಾಗವನ್ನೇ ಆರಿಸಿಕೊಂಡು, ಕಾರಿನಲ್ಲಿ ಶವಗಳನ್ನು ಸಾಗಿಸಿ ಕಂದಕಕ್ಕೆ ಎಸೆದು ಪರಾರಿಯಾಗಿದ್ದ.

  4. ಶಿರಾಡಿಘಾಟ್ (ಹಾಸನ/ಸಕಲೇಶಪುರ): ಶಂಕರ್ ಹಾಗೂ ನಳಿನಿ ಅವರ ಮೃತದೇಹಗಳು. ಇಂದುಶೇಖರ್ ನೀಡಿದ ಸುಳಿವಿನ ಮೇರೆಗೆ ಸಕಲೇಶಪುರ ಪೊಲೀಸರು ಶಿರಾಡಿಘಾಟ್ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿ ಈ ಶವಗಳನ್ನು ಪತ್ತೆಹಚ್ಚಿದ್ದಾರೆ.

    Advertisement

ಇದನ್ನೂ ಓದಿ: ಬೆಂಗಳೂರು 7 ಜನರ ಭೀಕರ ಹತ್ಯೆ ಪ್ರಕರಣ: ಇಂದುಶೇಖರ್ ಕರಾಳ ಮುಖ ಬಯಲು: ನೆರೆಹೊರೆಯವರಿಂದ ಆಘಾತಕಾರಿ ಸತ್ಯಾಂಶ

ಕೊಲೆಗೂ ಮುನ್ನವೇ ‘ಮಾಸ್ಟರ್ ಪ್ಲಾನ್’: ಗೋಣಿಚೀಲ, ಟೇಪ್, ಕೆಮಿಕಲ್ ಖರೀದಿ!

ಇಂದುಶೇಖರ್ ಈ ಸರಣಿ ಹತ್ಯೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಾರೂ ಊಹಿಸದ ರೀತಿಯಲ್ಲಿ ಪ್ಲಾನ್ ಮಾಡಿದ್ದ ಎನ್ನುವುದಕ್ಕೆ ಸ್ಪಷ್ಟ ಸಾಕ್ಷಿಗಳು ಸಿಕ್ಕಿವೆ. ಮೃತದೇಹಗಳನ್ನು ಮರೆಮಾಚಲು ಮತ್ತು ಚೀಲಗಳಲ್ಲಿ ತುಂಬಲು ಅಗತ್ಯವಿರುವ ಗೋಣಿಚೀಲಗಳು, ಪ್ಲಾಸ್ಟಿಕ್ ಕವರ್‌ಗಳು ಹಾಗೂ ಗಟ್ಟಿ ಟೇಪ್‌ಗಳನ್ನು ಆತ ಮೊದಲೇ ಖರೀದಿಸಿಟ್ಟುಕೊಂಡಿದ್ದನು.

 ಮನೆಯೊಳಗೆ ನಡೆದ ಭೀಕರ ಹತ್ಯೆಯ ಬಳಿಕ, ನೆಲ ಹಾಗೂ ಗೋಡೆಗಳ ಮೇಲಿದ್ದ ರಕ್ತದ ಕಲೆಗಳನ್ನು ಸಂಪೂರ್ಣವಾಗಿ ತೊಳೆಯಲು ಆತ ವಿಶೇಷ ಕೆಮಿಕಲ್ (Chemical) ಬಳಸಿದ್ದನು. ತಾನು ವಾಸವಿದ್ದ ಮನೆ ಸುತ್ತಮುತ್ತಲಿನ ಅಂಗಡಿಗಳಲ್ಲೇ ಕೆಲವು ವಸ್ತುಗಳನ್ನು ಖರೀದಿಸಿದ್ದರೆ, ಅಲ್ಲಿ ಸಿಗದ ಇತರೆ ವಸ್ತುಗಳಿಗಾಗಿ ಬೇರೆ ಬೇರೆ ಪ್ರದೇಶಗಳ ಅಂಗಡಿಗಳಿಗೂ ಅಲೆದಾಡಿ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದ ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ. ಸದ್ಯ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ಮತ್ತಷ್ಟು ಆಳವಾದ ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ