ಅಬುಧಾಬಿ: ಯುಎಇ ಮೂಲದ ಖ್ಯಾತ ಬಿಆರ್ಎಸ್ ಗ್ರೂಪ್ ಮತ್ತು ‘ಎನ್ಎಂಸಿ ಹೆಲ್ತ್ಕೇರ್’ ಬಹುಕೋಟಿ ವಂಚನೆ ಪ್ರಕರಣದಲ್ಲಿ ಯುಎಇ ಕೋರ್ಟ್ ಮಹತ್ವದ ಹಾಗೂ ಆಘಾತಕಾರಿ ತೀರ್ಪು ನೀಡಿದೆ. ಸಂಸ್ಥೆಯ ಸ್ಥಾಪಕ, ಮಂಗಳೂರು ಮೂಲದ ಉದ್ಯಮಿ ಬಿ.ಆರ್. ಶೆಟ್ಟಿ ಹಾಗೂ ಮಾಜಿ ಸಿಇಒ ಪ್ರಶಾಂತ್ ಮಂಗತ್ ಅವರು ಶೇಕಡಾ 100 ರಷ್ಟು ವಂಚನೆ ಮತ್ತು ಅಕ್ರಮ ವ್ಯವಹಾರಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅಬುಧಾಬಿ ಗ್ಲೋಬಲ್ ಮಾರ್ಕೆಟ್ (ADGM) ನ್ಯಾಯಾಲಯವು ಈ ತೀರ್ಪು ನೀಡಿದ್ದು, ಬರೋಬ್ಬರಿ 5.397 ಬಿಲಿಯನ್ ಅಮೆರಿಕನ್ ಡಾಲರ್ (ಭಾರತೀಯ ರೂಪಾಯಿ ಲೆಕ್ಕದಲ್ಲಿ ಅಂದಾಜು ₹50,683 ಕೋಟಿ) ಮೊತ್ತದ ವಂಚನೆಗೆ ಇಬ್ಬರನ್ನೂ ನೇರ ಹೊಣೆಗಾರರನ್ನಾಗಿ ಮಾಡಿದೆ.
2012 ರಿಂದ 2020ರವರೆಗೆ ನಡೆದ ಭಾರಿ ಅಕ್ರಮ:
2012 ರಿಂದ 2020 ರ ನಡುವಿನ ಅವಧಿಯಲ್ಲಿ ಎನ್ಎಂಸಿ ಹೆಲ್ತ್ಕೇರ್ ಸಂಸ್ಥೆಯು ಬ್ಯಾಂಕ್ಗಳು ಮತ್ತು ಹೂಡಿಕೆದಾರರಿಂದ ಪಡೆದಿದ್ದ ನೈಜ ಸಾಲದ ವಿವರಗಳನ್ನು ಮರೆಮಾಚಿ, ಸುಳ್ಳು ಲೆಕ್ಕಪತ್ರಗಳನ್ನು ತೋರಿಸಿ ಅಕ್ರಮ ಎಸಗಿರುವುದು ಕೋರ್ಟ್ನಲ್ಲಿ ಸಾಬೀತಾಗಿದೆ. ಸಂಸ್ಥೆಯ ನಿಧಿಯಿಂದ ಬಿ.ಆರ್. ಶೆಟ್ಟಿ ಅವರ ವೈಯಕ್ತಿಕ ಖಾತೆಗಳಿಗೆ 500ಕ್ಕೂ ಹೆಚ್ಚು ಬಾರಿ ಅಕ್ರಮವಾಗಿ ಹಣ ರವಾನೆಯಾಗಿದೆ. ಕಂಪನಿಯ ಖಾತೆಯಿಂದ ಬಿ.ಆರ್. ಶೆಟ್ಟಿ ಅವರ ಖಾತೆಗಳಿಗೆ ಒಟ್ಟು 4.18 ಬಿಲಿಯನ್ ದಿರ್ಹಮ್ (AED) ವರ್ಗಾವಣೆಯಾಗಿದ್ದು, ಅದರಲ್ಲಿ ಎಲ್ಲಾ ವೆಚ್ಚಗಳನ್ನು ಹೊರತುಪಡಿಸಿ ಸುಮಾರು 2.6 ಬಿಲಿಯನ್ ದಿರ್ಹಮ್ ಹಣವನ್ನು ವೈಯಕ್ತಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.

ವಾದ-ಸಮರ್ಥನೆ ತಳ್ಳಿಹಾಕಿದ ಯುಎಇ ನ್ಯಾಯಾಲಯ:
“ಕಂಪನಿಯಲ್ಲಾದ ಅಕ್ರಮಕ್ಕೂ ನನಗೂ ಸಂಬಂಧವಿಲ್ಲ, ಆಡಳಿತ ಮಂಡಳಿಯ ಇತರರು ನನ್ನನ್ನು ವಂಚಿಸಿದ್ದಾರೆ, ತಾನೂ ಸಹ ವಂಚನೆಗೆ ಬಲಿಯಾಗಿದ್ದೇನೆ” ಎಂದು ಬಿ.ಆರ್. ಶೆಟ್ಟಿ ಕೋರ್ಟ್ನಲ್ಲಿ ಮಂಡಿಸಿದ್ದ ವಾದವನ್ನು ಪೀಠ ಸಂಪೂರ್ಣವಾಗಿ ತಳ್ಳಿಹಾಕಿದೆ. ಸಂಸ್ಥೆಯ ಮಾಜಿ ಸಿಇಒ ಪ್ರಶಾಂತ್ ಮಂಗತ್, “ನನಗೆ ಸೂಕ್ತ ಹಣಕಾಸಿನ ಮೇಲ್ವಿಚಾರಣೆ ನಡೆಸಲು ಅವಕಾಶ ಇರಲಿಲ್ಲ” ಎಂದು ನೀಡಿದ ಸಮರ್ಥನೆಯನ್ನೂ ಕೋರ್ಟ್ ನಿಕೃಷ್ಟವಾಗಿ ವಜಾಗೊಳಿಸಿದೆ.
ಇದನ್ನೂ ಓದಿ: ಮಂಗಳೂರು: ಸ್ಕೂಟರ್ಗೆ ಪಿಕಪ್ ವಾಹನ ಡಿಕ್ಕಿ ಹೊಡೆಸಿ ಇಬ್ಬರ ಸಾವಿಗೆ ಕಾರಣವಾದ ಘಟನೆಗೆ ಟ್ವಿಸ್ಟ್

ಮುಂದಿನ ಹಂತ: ಹಣ ವಸೂಲಿ ತೀರ್ಮಾನ!
ಪ್ರಕರಣದಲ್ಲಿ ಇಬ್ಬರ ಅಪರಾಧ ಸಾಬೀತಾಗಿದ್ದರೂ, ಇದು ಅಂತಿಮ ಪಾವತಿ ಆದೇಶವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಭಾರಿ ಅಕ್ರಮದಲ್ಲಿ ಇಬ್ಬರಿಂದ ಎಷ್ಟು ಹಣವನ್ನು ದಂಡ ಅಥವಾ ವಸೂಲಾತಿಯಾಗಿ (Recovery) ವಸೂಲಿ ಮಾಡಬೇಕು ಎಂಬುದನ್ನು ಕೋರ್ಟ್ ಮುಂದಿನ ವಿಚಾರಣೆಯ ಅವಧಿಯಲ್ಲಿ ನಿರ್ಧರಿಸಲಿದೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


