ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರ ಮೇಲೆ ಬೆಲೆ ಏರಿಕೆಯ ಬಿಸಿ ಮತ್ತಷ್ಟು ಜೋರಾಗಿದೆ. ನಗರದಲ್ಲಿ ಚಾಲನೆಯಲ್ಲಿರುವ ಶೇಕಡಾ 50 ರಷ್ಟು ಆಟೋ ರಿಕ್ಷಾಗಳಿಗೆ ಆಧಾರವಾಗಿರುವ ಆಟೋ ಎಲ್‌ಪಿಜಿ (Auto LPG) ಗ್ಯಾಸ್ ದರದಲ್ಲಿ ಅಕ್ಟೋಬರ್ ತಿಂಗಳೊಂದರಲ್ಲೇ ಕೆಜಿಗೆ ₹11 ರಷ್ಟು ಭಾರಿ ಏರಿಕೆಯಾಗಿದ್ದು, ಆಟೋ ಚಾಲಕರ ದೈನಂದಿನ ಬದುಕನ್ನು ಆರ್ಥಿಕವಾಗಿ ಕಂಗೆಡಿಸಿದೆ. ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಇನ್ನೊಂದೆಡೆ ಇಂಧನ ದರ ಹೆಚ್ಚಳದಿಂದ ಜೀವನ ನಡೆಸುವುದು ಅತ್ಯಂತ ದುಸ್ತರವಾಗಿದೆ ಎಂದು ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಚಾಲಕರು newindianexpress ಜತೆ ಮಾತನಾಡಿದ್ದಾರೆ.
ಕಳೆದ 10 ವರ್ಷಗಳಿಂದ ಆಟೋ ಚಾಲನೆ ಮಾಡುತ್ತಿರುವ ಮೂರ್ತಿ ನಾಯಕ್ ಎಂಬುವವರು ಮಾತನಾಡಿ, “ನಗರದ ಹೆಚ್ಚಿನ ಗ್ಯಾಸ್ ರೀಫಿಲ್ಲಿಂಗ್ ಬಂಕ್‌ಗಳಲ್ಲಿ ಅವರ ಮನಸ್ಸಿಗೆ ಬಂದಂತೆ ಗ್ಯಾಸ್ ಬೆಲೆ ಹೆಚ್ಚಿಸಲಾಗುತ್ತಿದೆ. ಇದನ್ನು ಯಾವ ಆಧಾರದ ಮೇಲೆ ಹೆಚ್ಚಿಸುತ್ತಿದ್ದೀರಿ ಎಂದು ಪ್ರಶ್ನಿಸಿದರೆ, ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸುತ್ತಾರೆ. ಒಂದೋ ನಿಗದಿಪಡಿಸಿದ ದರಕ್ಕೆ ಗ್ಯಾಸ್ ಹಾಕಿ, ಇಲ್ಲವೇ ಮುಂದೆ ಹೋಗಿ ಎನ್ನುತ್ತಾರೆ. ಆಟೋದ ಕನಿಷ್ಠ ಬಾಡಿಗೆ ದರ (Minimum Fare) ₹36 ರಲ್ಲೇ ಉಳಿದಿದೆ. ಆದರೆ ಜೀವನ ವೆಚ್ಚ ಮತ್ತು ಇಂಧನ ಬೆಲೆ ಮಾತ್ರ ಗಗನಕ್ಕೇರಿದೆ. ತಿಂಗಳಿಗೆ ಎರಡರಿಂದ ಮೂರು ಬಾರಿ ಎಲ್‌ಪಿಜಿ ದರ ಏರಿಸಿದರೆ ನಾವು ಬದುಕುವುದು ಹೇಗೆ?” ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಮತ್ತೊಬ್ಬ ಆಟೋ ಚಾಲಕ ವಿ. ಪ್ರಕಾಶ್ ತಮ್ಮ ದೈನಂದಿನ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಹಿಂದೆ ತಿಂಗಳಿಗೆ ₹1,000 ಆಗುತ್ತಿದ್ದ ದಿನಸಿ ವೆಚ್ಚ ಈಗ ₹2,300 ರಿಂದ ₹2,400 ಕ್ಕೆ ಏರಿಕೆಯಾಗಿದೆ. ಅಡುಗೆ ಎಣ್ಣೆಗೆ ಲೀಟರ್‌ಗೆ ₹180 ನೀಡಬೇಕು. ಅಕ್ಕಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆಯೂ ಏರಿದೆ. ದರ ಪರಿಷ್ಕರಣೆ ಅಥವಾ ದರ ನಿಗದಿಯ ನಿರ್ಧಾರ ಕೈಗೊಳ್ಳುವಾಗ ಆಟೋ ಚಾಲಕರನ್ನು ಯಾರೂ ಸಂಪರ್ಕಿಸುವುದೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಬಸ್ ದರ ಏರಿಕೆ ಬಹುತೇಕ ಖಚಿತ

ಆಟೋ ಚಾಲಕರ ಈ ಸಂಕಷ್ಟದ ನಡುವೆಯೇ ಆಟೋ ರಿಕ್ಷಾ ಚಾಲಕರ ಯೂನಿಯನ್ (ARDU) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಅವರು ಸರ್ಕಾರಕ್ಕೆ ಪ್ರಮುಖ ಮನವಿಯೊಂದನ್ನು ಮಾಡಿದ್ದಾರೆ. “ಆಯಾ ಜಿಲ್ಲೆಗಳ ಡಿಸಿ ಅವರು ಬಾಡಿಗೆ ದರ ನಿಗದಿಪಡಿಸುವ ಪ್ರಸ್ತುತ ವ್ಯವಸ್ಥೆಗೆ ಬ್ರೇಕ್ ಹಾಕಬೇಕು. ಇಡೀ ಕರ್ನಾಟಕ ರಾಜ್ಯಾದ್ಯಂತ ಏಕರೂಪದ ಆಟೋ ಬಾಡಿಗೆ ದರವನ್ನು ಸರ್ಕಾರವೇ ಜಾರಿಗೆ ತರಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


