Breaking News

ಬಿಕ್ಲು ಶಿವ ಕೊಲೆ ಕೇಸ್: ಶಾಸಕ ಭೈರತಿ ಬಸವರಾಜ್‌ಗೆ ಹೃದಯ ಸಮಸ್ಯೆ; ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೋರ್ಟ್ ಆದೇಶ!

ಬೆಂಗಳೂರು, ಫೆ.13:  ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಪ್ರಕರಣದ ಐದನೇ ಆರೋಪಿ (A5), ಶಾಸಕ ಭೈರತಿ ಬಸವರಾಜ್ (Bhairathi Basavaraj)ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯವು ಸಿಐಡಿ ಪೊಲೀಸರಿಗೆ ಮಹತ್ವದ ಸೂಚನೆ ನೀಡಿದೆ. ಸಿಐಡಿ ಕಸ್ಟಡಿಯಲ್ಲಿದ್ದ ಭೈರತಿ ಬಸವರಾಜ್ ಅವರನ್ನು ಇಂದು ವಾಡಿಕೆಯ ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ನಡೆದ ತಪಾಸಣೆಯಲ್ಲಿ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಕಂಡುಬಂದಿದೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ಶಿಫಾರಸು ಮಾಡಿದ್ದರು.

ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ವರದಿಯನ್ನು ಗಮನಿಸಿದ 42ನೇ ಎಸಿಜೆಎಂ ನ್ಯಾಯಾಲಯವು, ಆರೋಪಿಯ ಆರೋಗ್ಯದ ದೃಷ್ಟಿಯಿಂದ ಕೂಡಲೇ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ಅನುಮತಿ ನೀಡಿದೆ. ತನಿಖಾಧಿಕಾರಿಯಾದ ಡಿವೈಎಸ್‌ಪಿ ಗೌತಮ್ ಅವರಿಗೆ ಕೆಲವೊಂದು ಸೂಚನೆಯನ್ನು ನೀಡಿದೆ. ಆರೋಪಿಯನ್ನು ಸಿಐಡಿ ಸುಪರ್ದಿಯಲ್ಲೇ ಜಯದೇವ ಆಸ್ಪತ್ರೆಗೆ ಕರೆದೊಯ್ಯಬೇಕು. ಅಗತ್ಯವಿರುವ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ವರದಿ ಪಡೆಯಬೇಕು ಎಂದು ಹೇಳಿದೆ.

Advertisement

ಇದನ್ನೂ ಓದಿ: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಭೈರತಿ ಬಸವರಾಜ್ ಪೊಲೀಸರ ವಶಕ್ಕೆ

ವೈದ್ಯಕೀಯ ವರದಿಯೊಂದಿಗೆ ನಾಳೆ (ಶನಿವಾರ) ನ್ಯಾಯಾಧೀಶರ ನಿವಾಸದಲ್ಲಿ ಆರೋಪಿಯನ್ನು ಹಾಜರುಪಡಿಸಬೇಕು. ಸದ್ಯ ಭೈರತಿ ಬಸವರಾಜ್ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಜಯದೇವ ಆಸ್ಪತ್ರೆಯ ವೈದ್ಯರು ನೀಡುವ ಅಂತಿಮ ಹೆಲ್ತ್ ರಿಪೋರ್ಟ್ ಆಧರಿಸಿ, ಅವರನ್ನು ಮತ್ತೆ ಸಿಐಡಿ ಕಸ್ಟಡಿಗೆ ನೀಡಬೇಕೆ ಅಥವಾ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ (ಜೈಲು) ಒಪ್ಪಿಸಬೇಕೆ ಎಂಬುದು ನಾಳೆ ನಿರ್ಧಾರವಾಗಲಿದೆ. ಕೊಲೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಶಾಸಕರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು