ಬೆಂಗಳೂರಿನಲ್ಲಿ ಅಂತರ್‌ರಾಜ್ಯ ನಕಲಿ ನೋಟು ಜಾಲ ಭೇದಿಸಿದ ಚಾಮರಾಜಪೇಟೆ ಪೊಲೀಸರು: 21.68 ಲಕ್ಷ ರೂ. ಮೌಲ್ಯದ ₹500 ನಕಲಿ ನೋಟುಗಳೊಂದಿಗೆ 7 ಮಂದಿ ಗ್ಯಾಂಗ್ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬೃಹತ್ ಅಂತರ್‌ರಾಜ್ಯ ಜಾಲವನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ತಮಿಳುನಾಡು ಹಾಗೂ ತೆಲಂಗಾಣ ಮೂಲದ ಏಳು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಬರೋಬ್ಬರಿ ₹21.68 ಲಕ್ಷ ಮುಖಬೆಲೆಯ 4,337 ನಕಲಿ ₹500 ಮುಖಬೆಲೆಯ ನೋಟುಗಳನ್ನು ಜಪ್ತಿ ಮಾಡಿದ್ದಾರೆ.

ಬಂಧಿತರಿಂದ ಕಾರು, 8 ಮೊಬೈಲ್ ಫೋನ್‌ಗಳು ಹಾಗೂ ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಹೈಟೆಕ್ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಇಬ್ಬರು ಪ್ರಮುಖ ಸೂತ್ರಧಾರರು ಸೇರಿದಂತೆ ಇನ್ನು ನಾಲ್ವರು ತಲೆಮರೆಸಿಕೊಂಡಿದ್ದಾರೆ. ಸೆಪ್ಟೆಂಬರ್ 14 ರಂದು ಮೈಸೂರು ರಸ್ತೆ ಫ್ಲೈಓವರ್ ಇಳಿಯುವ ರ‍್ಯಾಂಪ್ ಬಳಿಯ ಪೆಟ್ರೋಲ್ ಬಂಕ್ ಸಮೀಪ ಕಾರಿನಲ್ಲಿ ನಕಲಿ ನೋಟುಗಳನ್ನು ಚಲಾವಣೆಗೆ ತರಲು ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ದಾಳಿ ನಡೆಸಿದ ಚಾಮರಾಜಪೇಟೆ ಪೊಲೀಸರ ತಂಡ ಇಬ್ಬರು ಆರೋಪಿಗಳನ್ನು ಕರಾರುವಾಕ್ಕಾಗಿ ಬಂಧಿಸಿ, ಅವರ ಬಳಿಯಿದ್ದ 3,000 ನಕಲಿ ₹500 ನೋಟುಗಳನ್ನು ವಶಕ್ಕೆ ಪಡೆಯಿತು. ಸೆಪ್ಟೆಂಬರ್ 15 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಕಸ್ಟಡಿಗೆ ಪಡೆದರು. ಕಸ್ಟಡಿಯಲ್ಲಿದ್ದ ಆರೋಪಿಗಳು ನೀಡಿದ ಮಹತ್ವದ ಸುಳಿವು ಆಧರಿಸಿ ಪೊಲೀಸರು ಇಡೀ ನೆಟ್‌ವರ್ಕ್ ಜಾಲಾಡಿದರು.

ಇದನ್ನೂ ಓದಿ: ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಸಚಿವ ಯು.ಟಿ. ಖಾದರ್ ಮಹತ್ವದ ಹೇಳಿಕೆ

ತಮಿಳುನಾಡಿನ ಚೆನ್ನೈನಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಮೂವರು ಶಂಕಿತರನ್ನು ಬಂಧಿಸಲಾಯಿತು. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿದ್ದ ಆರೋಪಿಯೊಬ್ಬನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ನೋಟು ಮುದ್ರಣ ಘಟಕವನ್ನು ಪತ್ತೆ ಮಾಡಿದರು. ಅಲ್ಲಿಂದ ಇನ್ನಷ್ಟು ನಕಲಿ ನೋಟುಗಳು, ಕಂಪ್ಯೂಟರ್, ಲ್ಯಾಪ್‌ಟಾಪ್, ಲ್ಯಾಮಿನೇಟರ್ ಯಂತ್ರ, ಕಲರ್ ಪ್ರಿಂಟರ್, ಕಟಿಂಗ್ ಮಿಷನ್, ಫೋಟೋ ಕಾಪಿ ಮಿಷನ್ ಹಾಗೂ ನಕಲಿ ನೋಟುಗಳಿಗೆ ಹಾಕುವ ಹೊಲೋಗ್ರಾಮ್‌ಗಳನ್ನು (Holograms) ಜಪ್ತಿ ಮಾಡಲಾಯಿತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *