ಮುಟ್ಟಿನ ನೋವಿದ್ದರೂ ಮ್ಯಾರಥಾನ್ ಪೂರ್ಣಗೊಳಿಸಿದ ಅಥ್ಲೀಟ್: ವಿಶ್ವದೆಲ್ಲಡೆ ಲಿ ಮೇಝೆನ್ ಸಾಧನೆಗೆ ಶ್ಲಾಘನೆ

ಚೀನಾ: ಸವಾಲುಗಳು ಎಷ್ಟೇ ಬಂದರೂ ಗುರಿ ತಲುಪುವ ರನ್ನರ್‌ಗಳ ಜಲಕ್ ಕ್ರೀಡಾಲೋಕದಲ್ಲಿ ಆಗಾಗ ಕಾಣಸಿಗುತ್ತದೆ. ಚೀನಾದ ೨೫ ವರ್ಷದ ಅಥ್ಲೀಟ್ ಲಿ ಮೇಝೆನ್ (Li Meizhen) ೨೦೨೪ರ ಸೆಪ್ಟೆಂಬರ್ ೨೨ ರಂದು ಚೀನಾದ ಹೆಬೈನಲ್ಲಿ ನಡೆದ ‘ಹೆಂಗ್‌ಶುಯಿ ಲೇಕ್ ಮ್ಯಾರಥಾನ್’ನಲ್ಲಿ ತೋರಿದ ಕ್ರೀಡಾಸ್ಪೂರ್ತಿ ಹಾಗೂ ಚಲದ ಪ್ರದರ್ಶನ ಜಾಗತಿಕ ಮಟ್ಟದಲ್ಲಿ ಭಾರಿ ಶ್ಲಾಘನೆಗೆ ಪಾತ್ರವಾಗಿದೆ.

47 ಕಿಲೋಮೀಟರ್‌ಗಳ ಸುದೀರ್ಘ ಮ್ಯಾರಥಾನ್ ಓಟದ ಕೊನೆಯ ಘಟ್ಟದಲ್ಲಿ ರನ್ನರ್ಸ್ ತೀವ್ರ ದೈಹಿಕ ಹಾಗೂ ಮಾನಸಿಕ ಆಯಾಸಕ್ಕೆ ಒಳಗಾಗುವುದು ಸಾಮಾನ್ಯ. ಆದರೆ ಲಿ ಮೇಝೆನ್ ಅವರಿಗೆ ಸುಮಾರು 34-35 ಕಿಲೋಮೀಟರ್ ಓಡಿದಾಗ ಅನಿರೀಕ್ಷಿತವಾಗಿ ಋತುಚಕ್ರ ಪ್ರಾರಂಭವಾಯಿತು. ಓಟದ ತೀವ್ರತೆಯ ಜೊತೆಗೆ ಹೊಟ್ಟೆನೋವು ಹಾಗೂ ಋತುಸ್ರಾವದ ಲಕ್ಷಣಗಳು ಕಂಡುಬಂದರೂ ಲಿ ಮೇಝೆನ್ ಕೊಂಚವೂ ಹಿಂಜರಿಯಲಿಲ್ಲ.

ಸಾರ್ವಜನಿಕವಾಗಿ ರಕ್ತದ ಕಲೆಗಳು ಕಾಣಿಸುತ್ತಿದ್ದರೂ, ದೈಹಿಕ ನೋವನ್ನು ಮೆಟ್ಟಿ ನಿಂತು ಓಟವನ್ನು ಮುಂದುವರಿಸಿದರು. ಅಂತಿಮವಾಗಿ 2 ಗಂಟೆ 35 ನಿಮಿಷಗಳಲ್ಲಿ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಲಕ್ಷಾಂತರ ಜನರ ಮನಗೆದ್ದರು.

ಇದನ್ನೂ ಓದಿ: ಪಂಚ್ ಹೊಡೆಯುವ ಮುನ್ನವೇ ಲವ್ಲಿನಾ ಕಮಾಲ್: 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ‘ಫಸ್ಟ್ ಮೆಡಲ್’

ಓಟ ಪೂರ್ಣಗೊಳಿಸಿದ ಬಳಿಕ ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ ಲಿ ಮೇಝೆನ್, ನಾನು ಅರ್ಧಕ್ಕೇ ಓಟವನ್ನು ನಿಲ್ಲಿಸಿದ್ದರೆ, ಮುಂಬರುವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಮತ್ತೊಂದು ಮ್ಯಾರಥಾನ್‌ನಲ್ಲಿ ಭಾಗವಹಿಸಿ ಮತ್ತೆ ಮೊದಲಿನಿಂದ ಓಡಬೇಕಾಗುತ್ತಿತ್ತು. ಅದಕ್ಕಾಗಿಯೇ ನಾನು ಹಠ ಬಿಡದೇ ಓಟವನ್ನು ಪೂರ್ಣಗೊಳಿಸಿದೆ.” ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗುತ್ತಿದ್ದಂತೆ, ‘ಋತುಚಕ್ರ’ದ ಸುತ್ತಲಿರುವ ಕಟ್ಟುಪಾಡುಗಳನ್ನು ಮುರಿದು, ಮಹಿಳೆಯರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ ಲಿ ಮೇಝೆನ್ ಅವರ ಧೈರ್ಯಕ್ಕೆ ಜಗತ್ತಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *