ದೆಹಲಿ: ರಾಜಧಾನಿ ದೆಹಲಿಯ ಜಂತರ್ ಮಂತರ್ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಲು ಮುಂಬೈನಿಂದ ಆಗಮಿಸಿ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಿಮಾನದ ಒಳಗಡೆಯೇ ವಶಕ್ಕೆ ಪಡೆದಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಈ ಹೈವೋಲ್ಟೇಜ್ ಡ್ರಾಮಾ ನಡೆದಿದೆ.
ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಮಹಿಳಾ ಸಿಬ್ಬಂದಿ ಸೇರಿದಂತೆ ದೆಹಲಿ ಪೊಲೀಸರ ವಿಶೇಷ ತಂಡವು ಅನಿರೀಕ್ಷಿತವಾಗಿ ವಿಮಾನದ ಒಳಗೆ ಪ್ರವೇಶಿಸಿ ಅಭಿಜೀತ್ ದೀಪ್ಕೆ ಹಾಗೂ ಅವರ ಸಹಚರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ವಶಕ್ಕೆ ತೆಗೆದುಕೊಂಡಿದೆ.
ಪೊಲೀಸರು ವಿಮಾನದೊಳಗೆ ಎಂಟ್ರಿ ಕೊಡುತ್ತಿದ್ದಂತೆಯೇ ಅಭಿಜೀತ್ ದೀಪ್ಕೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಲೈವ್ ಆರಂಭಿಸಿದರು. ಪೊಲೀಸರ ನಡೆಯನ್ನು ಪ್ರಶ್ನಿಸಿದ ದೀಪ್ಕೆ, “ನಾವು ವಿಮಾನದಿಂದ ಹೊರಗೆ ಬರುವವರೆಗೂ ನೀವು ಕಾಯಬಹುದಿತ್ತು. ನಾವು ಬಂಧನಕ್ಕೆ ಹೆದರುವುದಿಲ್ಲ, ಬನ್ನಿ ನಮ್ಮನ್ನು ಬಂಧಿಸಿ” ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಯಾಗಿ ದೆಹಲಿ ಪೊಲೀಸ್ ಅಧಿಕಾರಿಗಳು, “ಇದು ಬಂಧನವಲ್ಲ, ದಯವಿಟ್ಟು ಪೊಲೀಸರ ಜೊತೆ ಸಹಕರಿಸಿ” ಎಂದು ಮನವಿ ಮಾಡಿದರು. ತದನಂತರ ಮೂವರನ್ನೂ ವಿಮಾನ ನಿಲ್ದಾಣದಿಂದ ರಹಸ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ.
ಧ್ರುವ್ ರಾಠಿ ಸೇರಿದಂತೆ 400ಕ್ಕೂ ಹೆಚ್ಚು ಪ್ರತಿಭಟನಾಕಾರರ ವಶ:
ದಿನದ ಪ್ರಮುಖ ಬೆಳವಣಿಗೆಯಾಗಿ, ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಹಾಗೂ ಸಿಜೆಪಿ ಲೀಗಲ್ ಸೆಲ್ ಮುಖ್ಯಸ್ಥೆ ರತ್ನ ಸಿಂಗ್ ಅವರನ್ನು ಸಹ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯಲು ಬೆಳಗಿನ ಜಾವವೇ ಅವರ ಮನೆಗಳಲ್ಲಿ ವಶಕ್ಕೆ ಪಡೆಯಲಾಗಿದೆ.
ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದೆಹಲಿ ಪೊಲೀಸರು ಶುಕ್ರವಾರ ರಾತ್ರಿಯಿಂದಲೇ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ನಗರದ ವಿವಿಧ ಭಾಗಗಳಿಂದ 400ಕ್ಕೂ ಹೆಚ್ಚು ಶಂಕಿತ ಪ್ರತಿಭಟನಾಕಾರರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಸಿಜೆಪಿ ತೀವ್ರ ಆಕ್ರೋಶ – ದೆಹಲಿಯಲ್ಲಿ 20 ಸಾವಿರ ಪಡೆಗಳ ನಿಯೋಜನೆ:
ಸಿಜೆಪಿ ನಾಯಕರನ್ನು ವಿಮಾನದಲ್ಲೇ ವಶಕ್ಕೆ ಪಡೆದ ದೆಹಲಿ ಪೊಲೀಸರ ಕ್ರಮವನ್ನು ಸಿಜೆಪಿ ಆಡಳಿತ ಮಂಡಳಿ ತೀವ್ರವಾಗಿ ಖಂಡಿಸಿದೆ. “ಶಾಂತಿಯುತ ಪ್ರತಿಭಟನೆಯ ನೇತೃತ್ವವನ್ನು ಮಟ್ಟಹಾಕಲು ಸರ್ಕಾರ ಈ ರೀತಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹಸಿಹಸಿಯಾಗಿ ಉಲ್ಲಂಘಿಸುತ್ತಿದೆ” ಎಂದು ಆರೋಪಿಸಿರುವ ಸಿಜೆಪಿ, ಬಂಧಿತ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹಮ್ಮಿಕೊಂಡಿದ್ದ ಈ ಪ್ರತಿಭಟನೆಗೆ ಮುಂಚಿತವಾಗಿ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ದೆಹಲಿ ಪೊಲೀಸರು ಶುಕ್ರವಾರವೇ ಅನುಮತಿಯನ್ನು ನಿರಾಕರಿಸಿದ್ದರು. ಪ್ರತಿಭಟನೆ ತಡೆಯಲು ರಾಜಧಾನಿಯಲ್ಲಿ 45 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದ್ದು, ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸಶಸ್ತ್ರ ಪಡೆ ಸೇರಿದಂತೆ 20,000ಕ್ಕೂ ಹೆಚ್ಚು ಜವಾನರನ್ನು ದೆಹಲಿಯಲ್ಲಿ ನಿಯೋಜಿಸಲಾಗಿದೆ.

