ಬೆಂಗಳೂರು , ಸೆ.11: ಇಂದಿನಿಂದ (ಸೆಪ್ಟೆಂಬರ್ 11) ದೇಶಾದ್ಯಂತ ಸತತ ನಾಲ್ಕು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಬ್ಯಾಂಕ್ ನೌಕರರ ರಾಷ್ಟ್ರವ್ಯಾಪಿ ಮುಷ್ಕರ ಹಾಗೂ ಸಾಲು ಸಾಲು ಸಾಪ್ತಾಹಿಕ ಮತ್ತು ಹಬ್ಬದ ರಜೆಗಳು ಒಟ್ಟಿಗೆ ಬಂದಿರುವುದೇ ಈ ಬ್ಯಾಂಕಿಂಗ್ ಸೇವೆಯ ವ್ಯತ್ಯಯಕ್ಕೆ ಪ್ರಮುಖ ಕಾರಣವಾಗಿದೆ. ತುರ್ತು ಬ್ಯಾಂಕಿಂಗ್ ಕೆಲಸಗಳಿರುವ ಗ್ರಾಹಕರು ಮಂಗಳವಾರದವರೆಗೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಪರ್ಯಾಯವಾಗಿ ಡಿಜಿಟಲ್ ಹಾಗೂ ಆನ್ಲೈನ್ ಸೇವೆಗಳನ್ನು ಬಳಸಿಕೊಳ್ಳುವಂತೆ ಬ್ಯಾಂಕ್ ಆಡಳಿತ ಮಂಡಳಿಗಳು ಮನವಿ ಮಾಡಿವೆ.
ವಾರಕ್ಕೆ 5 ದಿನಗಳ ಕೆಲಸದ ಅವಧಿ ಜಾರಿ ಮಾಡಬೇಕು ಹಾಗೂ ಪಿಂಚಣಿ ಸುಧಾರಣೆ ತರಬೇಕು ಎಂದು ಆಗ್ರಹಿಸಿ ವಿವಿಧ ಬ್ಯಾಂಕ್ ಒಕ್ಕೂಟಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿರುವುದರಿಂದ ಶಾಖೆಗಳ ಸೇವೆ ಇರುವುದಿಲ್ಲ. ತಿಂಗಳ ಎರಡನೇ ಶನಿವಾರದ ನಿಮಿತ್ತ ಬ್ಯಾಂಕ್ಗಳಿಗೆ ಅಧಿಕೃತ ರಜೆ. ಭಾನುವಾರ ಸಾಪ್ತಾಹಿಕ ರಜೆ. ಸೋಮವಾರ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ದೇಶಾದ್ಯಂತ ಸಾರ್ವಜನಿಕ ರಜೆ.ಆದ್ದರಿಂದ, ಬ್ಯಾಂಕ್ ಶಾಖೆಗಳ ನೇರ ವ್ಯವಹಾರಗಳು ಮಂಗಳವಾರದಿಂದ (ಸೆ. 15) ಮಾತ್ರ ಪುನರಾರಂಭಗೊಳ್ಳಲಿವೆ.
ಇದನ್ನೂ ಓದಿ: ಗೌರಿ-ಗಣೇಶ ಹಬ್ಬಕ್ಕೆ ‘ಕೆಎಸ್ಆರ್ಟಿಸಿ’ ಬಿಗ್ ಆಫರ್: ಬೆಂಗಳೂರಿನಿಂದ 2,400 ಹೆಚ್ಚುವರಿ ವಿಶೇಷ ಬಸ್ಗಳ ಸಂಚಾರ
ಚೆಕ್ ಕ್ಲಿಯರೆನ್ಸ್, ಡಿಡಿ ಪಡೆಯುವುದು, ನಗದು ಠೇವಣಿ/ ಹಿಂಪಡೆಯುವಿಕೆ ಮತ್ತು ಖಾತೆಯಿಂದ ನೇರ ನಗದು ವಹಿವಾಟು ನಡೆಸುವಂತಹ ಬ್ಯಾಂಕ್ ಶಾಖೆಯ ಪ್ರತ್ಯಕ್ಷ ಕೆಲಸಗಳು ಇರುವುದಿಲ್ಲ. ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ನೆಟ್ ಬ್ಯಾಂಕಿಂಗ್ (Net Banking), ಮೊಬೈಲ್ ಬ್ಯಾಂಕಿಂಗ್ ಮತ್ತು ಯುಪಿಐ ವಹಿವಾಟುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸತತ 4 ದಿನಗಳ ಕಾಲ ರಜೆ ಇರುವುದರಿಂದ ಹಲವೆಡೆ ಎಟಿಎಂಗಳಲ್ಲಿ (ATMs) ಹಣದ ಅಭಾವ ಅಥವಾ ನಗದು ಖಾಲಿಯಾಗುವ ಸಾಧ್ಯತೆಯಿದೆ. ಹೀಗಾಗಿ ಗ್ರಾಹಕರು ತಮ್ಮ ತುರ್ತು ಖರ್ಚುಗಳಿಗೆ ಮುಂಚಿತವಾಗಿಯೇ ಅಗತ್ಯ ನಗದನ್ನು ಕಾಯ್ದಿರಿಸಿಕೊಳ್ಳುವುದು ಸೂಕ್ತ.

