ದೆಹಲಿ: ಭಾರತೀಯ ಕ್ರಿಕೆಟ್‌ನ ಇತ್ತೀಚಿನ ಅದ್ಭುತ ಪ್ರತಿಭೆ, ಹದಿಹರೆಯದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಮುಂಬರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ನಡುವೆ, ಮೈದಾನಕ್ಕಿಳಿಯುವ ಮುನ್ನ ಈ ಯುವ ಬ್ಯಾಟರ್ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಮಾಡುವ ವಿಶಿಷ್ಟ ತಯಾರಿಯೊಂದನ್ನು ಪ್ರಖ್ಯಾತ ಉದ್ಯಮಿ ಹರ್ಷ ಗೋಯೆಂಕಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಭಾರಿ ವೈರಲ್ ಆಗಿದೆ.
ಉದ್ಯಮಿ ಹರ್ಷ ಗೋಯೆಂಕಾ ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುತ್ತಾ, “ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಪಂದ್ಯದ ಆರಂಭಕ್ಕೂ ಮುನ್ನ ಒತ್ತಡ ಮುಕ್ತವಾಗಿರಲು ಮತ್ತು ಏಕಾಗ್ರತೆ ಕಾಯ್ದುಕೊಳ್ಳಲು ಏನು ಮಾಡುತ್ತಾರೆ ಗೊತ್ತಾ? ಅವರು ತಮ್ಮ ಮೊಬೈಲ್‌ನಲ್ಲಿ ತಮಗೆ ಇಷ್ಟವಾದ ‘ಛೋಟಾ ಭೀಮ್’ (Chhota Bheem) ಕಾರ್ಟೂನ್ ನೋಡುತ್ತಾರೆ! ಅವರು ಕ್ರಿಕೆಟ್‌ನ ಈ ದೊಡ್ಡ ಜಗತ್ತಿನಲ್ಲೂ ತಮ್ಮ ಬಾಲ್ಯದ ಮೌಲ್ಯಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವುದನ್ನು ನೋಡಿ ತುಂಬಾ ಸಂತೋಷವಾಗುತ್ತದೆ” ಎಂದು ಬರೆದುಕೊಂಡಿದ್ದಾರೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
Did you know what the young sensation Vaibhav Suryavanshi does before a match to stay calm and focused? He watches his favourite Chhota Bheem cartoons on his phone! 😊
So happy to know that he is holding on to his childhood.— Harsh Goenka (@hvgoenka) June 6, 2026
ಗೋಯೆಂಕಾ ಅವರ ಈ ಪೋಸ್ಟ್‌ಗೆ ನೆಟ್ಟಿಗರಿಂದ ಅದ್ಭುತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. “ವೃತ್ತಿಪರ ಕ್ರೀಡೆಯಂತಹ ಹೈ-ಪ್ರೆಶರ್ ಜಗತ್ತಿನಲ್ಲಿ, ಅದರಲ್ಲೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಮುಗ್ಧ ವಿಷಯಗಳಲ್ಲಿ ನೆಮ್ಮದಿ ಹುಡುಕುವುದು ಬಾಹ್ಯ ಗದ್ದಲಗಳಿಂದ ದೂರವಿರಲು ಆತನಿಗೆ ಸಿಕ್ಕಿರುವ ಸೂಪರ್ ಪವರ್ ಇದ್ದಂತೆ” ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಗೆ ವೈಭವ್ ಆಯ್ಕೆಯಾಗಿದ್ದು, ಇವರಿಗೇನಾದರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವ ಅವಕಾಶ ಸಿಕ್ಕರೆ, ಅವರು ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ (Debutant) ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ಸಾರ್ವಕಾಲಿಕ ದಾಖಲೆಯನ್ನು ವೈಭವ್ ಮುರಿಯಲಿದ್ದಾರೆ. ಬಿಸಿಸಿಐ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವೈಭವ್ ಅವರ ಆಯ್ಕೆಯನ್ನು ಅಧಿಕೃತಗೊಳಿಸಿದ್ದಾರೆ. ಇದೇ ವೇಳೆ ಶ್ರೇಯಸ್ ಅಯ್ಯರ್ ಅವರನ್ನು ಭಾರತ ಟಿ20 ತಂಡದ ನೂತನ ನಾಯಕರನ್ನಾಗಿ ಘೋಷಿಸಲಾಗಿದೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


