ದೆಹಲಿಯಲ್ಲಿ ನಡೆದದ್ದು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲ, ಭಾರತ ವಿರೋಧಿ ಷಡ್ಯಂತ್ರ: ಸಿಟಿ ರವಿ

ಬೆಂಗಳೂರು: ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯು ವಿದ್ಯಾರ್ಥಿಗಳ ನೈಜ ಚಳವಳಿಯಲ್ಲ, ಬದಲಾಗಿ ಅದೊಂದು ವ್ಯವಸ್ಥಿತವಾದ ‘ಭಾರತ ವಿರೋಧಿ ಷಡ್ಯಂತ್ರ’ ಹಾಗೂ ‘ಟೂಲ್ ಕಿಟ್ ಅಜೆಂಡಾ’ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಪ್ರತಿಭಟನೆಯ ಹಿಂದೆ ದೇಶ ವಿರೋಧಿ ಶಕ್ತಿಗಳು ಮತ್ತು ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಭಟನೆಯ ಸ್ವರೂಪವನ್ನು ಪ್ರಶ್ನಿಸಿರುವ ಸಿ.ಟಿ. ರವಿ, “ಜಿರಳೆ ಪಕ್ಷದ ಹೆಸರಿನಲ್ಲಿ ದೆಹಲಿಯಲ್ಲಿ ನಡೆದದ್ದು ವಿದ್ಯಾರ್ಥಿಗಳ ಪ್ರತಿಭಟನೆ ಖಂಡಿತಾ ಅಲ್ಲ. ವಿದ್ಯಾರ್ಥಿಗಳ ಸೋಗಿನಲ್ಲಿ ಸೇರಿರುವ ಮಾವೋವಾದಿಗಳು, ಎಡಪಂಥೀಯರು ಹಾಗೂ ದೇಶ ವಿರೋಧಿ ಶಕ್ತಿಗಳು ಖಂಡಿತವಾಗಿಯೂ ‘ಡೀಪ್ ಸ್ಟೇಟ್’ ಪ್ರಾಯೋಜಕತ್ವದ ಗುಂಪು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಹೇಳಿದ್ದಾರೆ.

ಎಕ್ಸ್​​​​ ಪೋಸ್ಟ್​​ ಇಲ್ಲಿದೆ ನೋಡಿ:


ಮುಂದುವರಿದು ಮಾತನಾಡಿದ ಅವರು, ಈ ಪ್ರತಿಭಟನೆಯ ಹಿಂದೆ ದೊಡ್ಡ ಮಟ್ಟದ ರಾಜಕೀಯ ಗೂಢಾಲೋಚನೆ ಇದೆ ಎಂದು ಆರೋಪಿಸಿದ್ದಾರೆ “ಭಾರತದಲ್ಲಿ ಗಲಭೆಗಳನ್ನು ಸೃಷ್ಟಿಸಿ, ಅರಾಜಕತೆ ಹಬ್ಬಿಸಿ ಸರ್ಕಾರವನ್ನು ಉರುಳಿಸುವುದೇ ಈ ಗುಂಪುಗಳ ಮುಖ್ಯ ಗುರಿಯಾಗಿದೆ. ದೇಶದ ಜನರಿಂದ ಬಹುಮತದಿಂದ ಆಯ್ಕೆಯಾದ ಸರ್ಕಾರವನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ರಾಷ್ಟ್ರ ವಿರೋಧಿ ಷಡ್ಯಂತ್ರ ಈಗ ದೇಶದ ಜನರ ಮುಂದೆ ಸಂಪೂರ್ಣವಾಗಿ ಬಯಲಾಗಿದೆ.” ಎಂದು ಸಿಟಿ ರವಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಬಾಂಗ್ಲಾ ವಲಸಿಗರಿಂದಲೇ ಲಂಚ ಪಡೆದ ಖಾಕಿ!’: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ತೀವ್ರ ಆಕ್ರೋಶ

ದೇಶದ ಆಂತರಿಕ ಭದ್ರತೆ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಸಹಿಸಲು ಸಾಧ್ಯವಿಲ್ಲ ಎಂದಿರುವ ಸಿ.ಟಿ. ರವಿ, “ವಿದೇಶೀ ಹಣದ ಬಲದಿಂದ ಭಾರತದಲ್ಲಿ ಅರಾಜಕತೆ ಸೃಷ್ಟಿಸಬಹುದು ಎನ್ನುವ ಇಂತಹ ದುಷ್ಟ ಪ್ರಯತ್ನಗಳು ದೇಶದಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *