ಹೈದರಾಬಾದ್: ಹೈದರಾಬಾದ್ನ ಐತಿಹಾಸಿಕ 435 ವರ್ಷ ಹಳೆಯ ಚಾರ್ಮಿನಾರ್ ಹಾಗೂ ಅದರ ಪಕ್ಕದಲ್ಲೇ ಇರುವ ಭಾಗ್ಯಲಕ್ಷ್ಮಿ ದೇವಾಲಯ ಸುತ್ತ ಮತ್ತೆ ತೀವ್ರ ವಿವಾದ ಭುಗಿಲೆದ್ದಿದೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ‘ಖಜಾನೆ’ ಹೆಸರಿನಲ್ಲಿ ಉಚಿತವಾಗಿ ಲಕ್ಷ್ಮಿ ದೇವಿ ಹಾಗೂ ಚಾರ್ಮಿನಾರ್ ಚಿತ್ರವುಳ್ಳ ಬೆಳ್ಳಿ ನಾಣ್ಯಗಳನ್ನು ಹಂಚಲಾಗುತ್ತಿದ್ದು, ಇದನ್ನು ಪಡೆಯಲು ನಿತ್ಯ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ಭಾರಿ ಜನಸಂದಣಿ ಹಾಗೂ ವಿಐಪಿಗಳ (VIP) ಸರಣಿ ಭೇಟಿಗಳು ಹಳೆಯ ನಗರದಲ್ಲಿ ಹೊಸ ರಾಜಕೀಯ ಮತ್ತು ಸಾಮಾಜಿಕ ಉದ್ವಿಗ್ನತೆಗೆ ಕಾರಣವಾಗಿವೆ.
ಧನ್ತೇರಸ್ (ನವೆಂಬರ್ 6) ನಿಂದ ಜಾರಿಯಲ್ಲಿರುವ ಈ ಉಚಿತ ಬೆಳ್ಳಿ ನಾಣ್ಯಗಳ ಹಂಚಿಕೆಯು ನವೆಂಬರ್ 11ರವರೆಗೆ ಮುಂದುವರೆಯಲಿದೆ. ದೇವಿಯ ಪಾದಗಳ ಬಳಿಯಿಟ್ಟು ಪೂಜಿಸಿದ ಈ ನಾಣ್ಯಗಳ ಒಂದು ಬದಿಯಲ್ಲಿ ಲಕ್ಷ್ಮಿ ದೇವಿ ಹಾಗೂ ಇನ್ನೊಂದು ಬದಿಯಲ್ಲಿ ಚಾರ್ಮಿನಾರ್ ಚಿತ್ರವಿದೆ. ಇವುಗಳನ್ನು ಮನೆಯಲ್ಲಿಟ್ಟರೆ ಸಮೃದ್ಧಿ ಸಿಗುತ್ತದೆ ಎಂಬ ನಂಬಿಕೆಯಿಂದಾಗಿ ಭಕ್ತರ ಸಂಖ್ಯೆ ಅಪಾರವಾಗಿ ಹೆಚ್ಚಾಗಿದೆ. ದೇವಾಲಯಕ್ಕೆ ಬರುವ ಭಕ್ತರ ಸಾಲು ಚಾರ್ಮಿನಾರ್ನಿಂದ ಸುಮಾರು 500 ಮೀಟರ್ ದೂರದಲ್ಲಿರುವ ಐತಿಹಾಸಿಕ ಗುಲ್ಜಾರ್ ಹೌಜ್ (Gulzar Houz) ಚೌಕದವರೆಗೆ ತಲುಪಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ತೆಲಂಗಾಣ ರಾಜ್ಯಪಾಲರು, ಸಂಸದ ಕೆ. ಲಕ್ಷ್ಮಣ್ ಸೇರಿದಂತೆ ಬಿಜೆಪಿ ಮತ್ತು ಬಿಆರ್ಎಸ್ (BRS) ಪಕ್ಷಗಳ ನಾಯಕರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ದೇಶದ ಒಳಗೆ ಇರುವ ಶತ್ರುಗಳನ್ನು ಸೋಲಿಸಲು ಒಗ್ಗೂಡಬೇಕು: ಪ್ರಧಾನಿ ಮೋದಿ ಸಂದೇಶ

‘ಬಾಬ್ರಿ ಮಸೀದಿಯಂತೆ ಚಾರ್ಮಿನಾರ್ ದುರಂತ’ ಆತಂಕ ವ್ಯಕ್ತಪಡಿಸಿದ ಮುಸ್ಲಿಂ ಸಂಘಟನೆಗಳು:
ಭಾಗ್ಯಲಕ್ಷ್ಮಿ ದೇವಾಲಯಕ್ಕೆ ಭಕ್ತರ ದಂಡು ಹರಿದುಬರುತ್ತಿರುವುದು ಮತ್ತು ತೆಲಂಗಾಣದ ಕಾಂಗ್ರೆಸ್ ಸರ್ಕಾರ ನಿಯೋಜಿಸಿರುವ ಸೌಲಭ್ಯಗಳ ವಿರುದ್ಧ ಮುಸ್ಲಿಂ ಆಕ್ಟಿವಿಸ್ಟ್ಗಳು ಹಾಗೂ ಎಐಎಂಐಎಂ ನಾಯಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪ್ರಸಿದ್ಧ ರಾಜಕೀಯ ವಿಶ್ಲೇಷಕ ಸಂಜಯ ಬಾರು, “ಚಾರ್ಮಿನಾರ್ ಕಟ್ಟಡದ ನಾಶ ಪ್ರಕ್ರಿಯೆ ಆರಂಭವಾಗಿದೆ” ಎಂದು ಟ್ವೀಟ್ ಮಾಡಿದರೆ, ಹಲವು ಮುಸ್ಲಿಂ ಸಂಘಟನೆಗಳು ಈ ಬೆಳವಣಿಗೆಯಿಂದ ಚಾರ್ಮಿನಾರ್ಗೆ ‘ಬಾಬ್ರಿ ಮಸೀದಿಯಂತಹ ಸ್ಥಿತಿ’ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿವೆ.
ಎಐಎಂಐಎಂ ನಾಯಕ ಮೊಹಮ್ಮದ್ ಮುಬಾಶಿರ್ ಹಾಗೂ ಸಾಮಾಜಿಕ ಕಾರ್ಯಕರ್ತ ಸೈಫ್ ಉಲ್ ಇಸ್ಲಾಂ ಫಾರೂಕಿ ಅವರು, “ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅನಧಿಕೃತ ಎಂದು ಕರೆದಿದ್ದ ದೇವಾಲಯಕ್ಕೆ ಮತ್ತು 2012ರ ಆಂಧ್ರಪ್ರದೇಶ ಹೈಕೋರ್ಟ್ ‘ಯಥಾಸ್ಥಿತಿ’ (Status Quo) ಕಾಯ್ದುಕೊಳ್ಳುವ ಆದೇಶಕ್ಕೆ ವಿರುದ್ಧವಾಗಿ ಸರ್ಕಾರ ಸೌಲಭ್ಯಗಳನ್ನು ನೀಡುವ ಮೂಲಕ ಕಾನೂನುಬದ್ಧತೆ ನೀಡುತ್ತಿದೆ” ಎಂದು ಕಿಡಿಕಾರಿದ್ದಾರೆ.


