ಬೆಲ್‌ಫಾಸ್ಟ್: ಭಾರತ ಮತ್ತು ಐರ್ಲೆಂಡ್ (India vs Ireland) ನಡುವಿನ ಚುಟುಕು ಕ್ರಿಕೆಟ್ ಸರಣಿಯ ಮಹಾಸಮರಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಇವೆರಡೂ ತಂಡಗಳ ನಡುವಿನ ಮೊದಲ ಟಿ20 ಪಂದ್ಯವು ಜೂನ್ 26 ರಂದು ಬೆಲ್‌ಫಾಸ್ಟ್‌ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.
ಈ ಮೈದಾನಕ್ಕೂ ಭಾರತ ಕ್ರಿಕೆಟ್‌ಗೂ ಒಂದು ಐತಿಹಾಸಿಕ ನಂಟಿದೆ. ಟೀಂ ಇಂಡಿಯಾ ಕೊನೆಯ ಬಾರಿಗೆ 2007 ರಲ್ಲಿ ಈ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯ ಆಡಿತ್ತು. ವಿಶೇಷವೆಂದರೆ, ಅದೇ ಪಂದ್ಯದ ಮೂಲಕ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ (Debut) ಮಾಡಿದ್ದರು. ಇದೀಗ ಬರೋಬ್ಬರಿ 19 ವರ್ಷಗಳ ಸುದೀರ್ಘ ಅವಧಿಯ ನಂತರ ಟೀಂ ಇಂಡಿಯಾ ಈ ಮೈದಾನದಲ್ಲಿ ಮೊದಲ ಬಾರಿಗೆ ಟಿ20 ಪಂದ್ಯವನ್ನು ಆಡಲು ಸಜ್ಜಾಗಿದೆ.

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಪಟಾಲಂನೊಂದಿಗೆ ಕಣಕ್ಕಿಳಿಯಲಿರುವ ಟೀಂ ಇಂಡಿಯಾ ಪರ ಈ ಪಂದ್ಯದಲ್ಲಿ ಎರಡರಿಂದ ಮೂರು ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಲಗ್ಗೆ ಇಡುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಇತ್ತೀಚೆಗೆ ದೇಶಿ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Suryavanshi) ಅವರ ಪ್ಲೇಯಿಂಗ್ ಇಲೆವೆನ್ (Playing XI) ಸ್ಥಾನ ಬಹುತೇಕ ಖಚಿತವಾಗಿದ್ದು, ಇಡೀ ಕ್ರಿಕೆಟ್ ಲೋಕ ಅವರ ಬ್ಯಾಟಿಂಗ್ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದೆ.
ಇದನ್ನೂ ಓದಿ: Cricket: ಆರ್ಚರ್ ಕುತ್ತಿಗೆಯಲ್ಲಿ ಕಾಣಿಸದ ಚಿನ್ನದ ಸರ: ಎಲ್ಲರ ಕಣ್ಣು ಪಾಕ್ ಆಟಗಾರರ ಮೇಲೆ!
ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ನಿರಾಶೆ ಮೂಡಿಸುವ ಸುದ್ದಿಯೊಂದನ್ನು ಹವಾಮಾನ ಇಲಾಖೆ ನೀಡಿದೆ. ಹವಾಮಾನ ವರದಿಯ (Weather Report) ಪ್ರಕಾರ, ಜೂನ್ 26 ರಂದು ಬೆಲ್‌ಫಾಸ್ಟ್‌ನಲ್ಲಿ ಇಡೀ ದಿನ ದಟ್ಟ ಮೋಡ ಕವಿದ ವಾತಾವರಣ ಇರಲಿದ್ದು, ಪಂದ್ಯ ನಡೆಯುವ ಸಮಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಶೇಕಡಾ 80 ಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ, ಮೊದಲ ಟಿ20 ಪಂದ್ಯವು ಟಾಸ್ ಕಾಣದೆ ರದ್ದಾಗುವ ಅಥವಾ ಓವರ್‌ಗಳನ್ನು ಕಡಿತಗೊಳಿಸಿ ಪಂದ್ಯ ನಡೆಸುವ ಆತಂಕ ಎದುರಾಗಿದೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

