ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪಂದ್ಯಗಳ ಪಾರದರ್ಶಕತೆ, ಭದ್ರತೆ ಮತ್ತು ಕ್ರೀಡಾ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಿಸಿಸಿಐ (BCCI) ಮತ್ತೊಂದು ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. ಮ್ಯಾಚ್ ಫಿಕ್ಸಿಂಗ್ ಹಾಗೂ ಲೈವ್ ಬೆಟ್ಟಿಂಗ್ ಆತಂಕಗಳ ಹಿನ್ನೆಲೆಯಲ್ಲಿ, ಇನ್ಮುಂದೆ ಐಪಿಎಲ್ ಆಟಗಾರರು ಹಾಗೂ ತಂಡದ ಯಾವುದೇ ಸಿಬ್ಬಂದಿಗಳು ಮೈದಾನ ಅಥವಾ ಕ್ರೀಡಾಂಗಣದ ನಿರ್ಬಂಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ‘ಸ್ಮಾರ್ಟ್ ಗ್ಲಾಸ್’ (Smart Sunglasses/High-Tech Glasses) ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸ್ಮಾರ್ಟ್ ಗ್ಲಾಸ್ ಸಂಪೂರ್ಣ ಬ್ಯಾನ್!:
ಬಿಸಿಸಿಐನ ಭ್ರಷ್ಟಾಚಾರ ನಿರೋಧಕ ಘಟಕ (ACU – Anti-Corruption Unit) ಈ ಕುರಿತು ಎಲ್ಲಾ ಐಪಿಎಲ್ ಫ್ರಾಂಚೈಸಿಗಳಿಗೆ ಅಧಿಕೃತ ಮಾರ್ಗಸೂಚಿಯನ್ನು ರವಾನಿಸಿದೆ. ಪಂದ್ಯ ನಡೆಯುವ ದಿನಗಳಂದು ‘ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳ ನಿಯೋಜಿತ ಪ್ರದೇಶ’ (PMOA – Players and Match Officials Area) ಹಾಗೂ ಡ್ರೆಸ್ಸಿಂಗ್ ರೂಮ್‌ಗಳಿಗೆ ಪ್ರವೇಶಿಸುವ ಮುನ್ನ ಮೊಬೈಲ್ ಮತ್ತು ಸ್ಮಾರ್ಟ್‌ವಾಚ್‌ಗಳ ಜೊತೆಗೆ ಈ ಸ್ಮಾರ್ಟ್ ಗ್ಲಾಸ್‌ಗಳನ್ನೂ ಸಹ ಕಡ್ಡಾಯವಾಗಿ ಜಮಾ ಮಾಡಬೇಕೆಂದು ಸೂಚಿಸಲಾಗಿದೆ.
ಹೈಟೆಕ್ ಗ್ಲಾಸ್ ನಿಷೇಧಕ್ಕೆ ಅಸಲಿ ಕಾರಣಗಳೇನು?:
ರಹಸ್ಯ ಮಾಹಿತಿ ಸೋರಿಕೆ ಭೀತಿ: ಇತ್ತೀಚಿನ ಆಧುನಿಕ ಸ್ಮಾರ್ಟ್ ಗ್ಲಾಸ್‌ಗಳಲ್ಲಿ ಇಂಟರ್ನೆಟ್, ಬ್ಲೂಟೂತ್ ಹಾಗೂ ವೈ-ಫೈ ತಂತ್ರಜ್ಞಾನ ಇರುತ್ತದೆ. ಇದರ ಮೂಲಕ ತಂಡದ ರಹಸ್ಯ ಗೇಮ್ ಪ್ಲಾನ್‌ಗಳು ಅಥವಾ ತಂತ್ರಗಳು ಸುಲಭವಾಗಿ ಹೊರಗೆ ಸೋರಿಕೆಯಾಗುವ ಅಪಾಯವಿದೆ.
ಲೈವ್ ಸ್ಟ್ರೀಮಿಂಗ್ ಮತ್ತು ಬೆಟ್ಟಿಂಗ್ ಆತಂಕ: ಈ ಗ್ಲಾಸ್‌ಗಳಲ್ಲಿ ಆಡಿಯೋ ರೆಕಾರ್ಡಿಂಗ್, ವಿಡಿಯೋ ಕಾಲಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡುವ ಅತ್ಯಾಧುನಿಕ ಫೀಚರ್‌ಗಳಿರುತ್ತವೆ. ಇವುಗಳನ್ನು ಬಳಸಿಕೊಂಡು ಲೈವ್ ಬೆಟ್ಟಿಂಗ್ (Live Betting), ಮ್ಯಾಚ್ ಫಿಕ್ಸಿಂಗ್ ಅಥವಾ ಸ್ಪಾಟ್ ಫಿಕ್ಸಿಂಗ್ ದಂಧೆಕೋರರಿಗೆ ಮೈದಾನದ ಒಳಗಿನ ಲೈವ್ ಅಪ್‌ಡೇಟ್‌ಗಳನ್ನು ರಹಸ್ಯವಾಗಿ ತಲುಪಿಸುವ ಸಾಧ್ಯತೆ ದಟ್ಟವಾಗಿರುತ್ತದೆ.
ತಂತ್ರಜ್ಞಾನ ಕಂಪನಿಗಳ ಪಿಚ್: ಕೆಲವು ಪ್ರಮುಖ ಹೈಟೆಕ್ ತಂತ್ರಜ್ಞಾನ ಕಂಪನಿಗಳು ಐಪಿಎಲ್ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಈ ಸ್ಮಾರ್ಟ್ ಗ್ಲಾಸ್‌ಗಳನ್ನು ಪ್ರಚಾರ ಮಾಡಲು ಮತ್ತು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಬಿಸಿಸಿಐ ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಹಳೆಯ ಸಂಬಂಧ ನೆನಪಿಸಿಕೊಂಡು ಬಿಸಿಸಿಐಗೆ ಪತ್ರ ಬರೆದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್
ಐಪಿಎಲ್ 2026ರ ಟೂರ್ನಿಯು ಈಗ ಪ್ಲೇ-ಆಫ್ಸ್ ಹಂತ ಮುಗಿಸಿ ಅಂತಿಮ ಘಟ್ಟಕ್ಕೆ ತಲುಪಿದ್ದು, ಕೇವಲ 2 ಪಂದ್ಯಗಳು ಬಾಕಿ ಉಳಿದಿರುವಾಗ ಬಿಸಿಸಿಐ ಈ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಒಂದು ವೇಳೆ ಯಾವುದೇ ಆಟಗಾರ ಅಥವಾ ಸಿಬ್ಬಂದಿ ಈ ನಿಯಮವನ್ನು ಉಲ್ಲಂಘಿಸಿದರೆ ಬಿಸಿಸಿಐನ ‘ಕೋಡ್ ಆಫ್ ಕಂಡಕ್ಟ್’ ಅಡಿಯಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


